ADVERTISEMENT

25 ವರ್ಷಗಳ ಹಿಂದೆ | ಶುಕ್ರವಾರ 3–3–1995

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 19:45 IST
Last Updated 2 ಮಾರ್ಚ್ 2020, 19:45 IST

ಲಲ್ಲೂ ಸರ್ಕಾರ ಮುಂದುವರಿಕೆಗೆ ಆದೇಶ ನೀಡಲು ಕೋರ್ಟ್‌ ನಕಾರ
ನವದೆಹಲಿ, ಮಾರ್ಚಿ 2 (ಪಿಟಿಐ):
ಬಿಹಾರದಲ್ಲಿ ಲಲ್ಲೂ ಪ್ರಸಾದ್‌ ಯಾದವ್‌ ನೇತೃತ್ವದ ಸರ್ಕಾರವನ್ನು ಮುಂದುವರಿಸಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಕೋರಿ ಅಲ್ಲಿನ ಆಡಳಿತಾರೂಢ ಜನತಾದಳವು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ಇಂದು ತಳ್ಳಿಹಾಕಿದೆ.

ಬಿಹಾರದ ಪ್ರಸಕ್ತ ವಿಧಾನಸಭೆ ಅವಧಿಯು ಮಾರ್ಚಿ 15ಕ್ಕೆ ಕೊನೆಗೊಳ್ಳುವುದು. ಆದರೆ ವಿಧಾನಸಭೆ ಚುನಾವಣೆಯನ್ನು ಮಾರ್ಚಿ 11, 15, 19ಕ್ಕೆ ಮುಂದೂಡಿ ಚುನಾವಣೆ ಆಯೋಗವು ಆದೇಶ ಹೊರಡಿಸಿದೆ. ಇದರಿಂದಾಗಿ ಅಲ್ಲಿ ಸಂವಿಧಾನ ಬಿಕ್ಕಟ್ಟು ತಲೆದೋರಲಿದೆ. ಅಧಿಕಾರಾವಧಿ ಮುಗಿದ ನಂತರ ಸರ್ಕಾರ ಮುಂದುವರಿಯಬೇಕೇ ರಾಷ್ಟ್ರಪತಿ ಆಡಳಿತ ವಿಧಿಸಬೇಕೇ ಎಂಬ ಚಿಂತನೆ ನಡೆದಿದೆ.

**

ADVERTISEMENT

ರಾಜ್ಯದಲ್ಲಿ ಕೃಷಿ ಉತ್ಪಾದನೆ ಇಳಿಮುಖ
ನವದೆಹಲಿ, ಮಾರ್ಚಿ 2:
ಕರ್ನಾಟಕದಲ್ಲಿ ಕಳೆದ ಎರಡು ವರ್ಷಗಳಲ್ಲಿ ಒಂದು ಕಡೆ ಅತಿವೃಷ್ಟಿ ಮತ್ತೊಂದು ಕಡೆ ಅನಾವೃಷ್ಟಿ ಸಂಭವಿಸಿದ ಪರಿಣಾಮ 1994–95ರ ಸಾಲಿನ ಕೃಷಿ ಉತ್ಪಾದನೆಯ ಗುರಿಯಲ್ಲಿ ಇಳಿಮುಖ ಕಂಡುಬರುವುದಾಗಿ ರಾಜ್ಯ ಸರ್ಕಾರವು ಅಂದಾಜು ಮಾಡಿದೆ.

**

ಟಿಪ್ಪು ವಂಶಸ್ಥರಿಗೆ ಶ್ರೀರಂಗಪಟ್ಟಣದಲ್ಲಿ ವಸತಿ
ಬೆಂಗಳೂರು, ಮಾರ್ಚಿ 2:
ಟಿಪ್ಪು ಸುಲ್ತಾನ್‌ ಅವರ ವಂಶಸ್ಥರಿಗೆ ಶ್ರೀರಂಗಪಟ್ಟಣದಲ್ಲಿ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಮಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಷೇಕ್‌ ಅಲಿ ಅವರ ನೇತೃತ್ವದಲ್ಲಿ ತಂಡವೊಂದನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಲು ಸರ್ಕಾರ ನಿರ್ಧರಿಸಿದೆ.

ರಾಜ್ಯ ಪತ್ರಾಗಾರ ಇಲಾಖೆಯ ಸಪ್ತಾಹದ ಅಂಗವಾಗಿ ಇಂದು ಏರ್ಪಡಿಸಿದ್ದ ಟಿಪ‍್ಪು ಸುಲ್ತಾನ್‌ ಅವರಿಗೆ ಸಂಬಂಧಿಸಿದ ಐತಿಹಾಸಿಕ ದಾಖಲೆಗಳ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರು ನಗರಾಭಿವೃದ್ಧಿ ರಾಜ್ಯ ಸಚಿವ ಆರ್‌. ರೋಷನ್‌ ಬೇಗ್‌ ಈ ವಿಷಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.