ಕೇಂದ್ರಕ್ಕೆ ಕರುಣಾಕರನ್, ಅಂತುಳೆ, ಡಾ. ಮಿಶ್ರಾ ಸೇರ್ಪಡೆ ಸಂಭವ
ನವದೆಹಲಿ, ಜೂನ್ 9:ಬಹಳ ದಿನಗಳಿಂದ ನಿರೀಕ್ಷಿಸಿರುವ ಕೇಂದ್ರ ಸಚಿವ ಸಂಪುಟದ ವಿಸ್ತರಣೆ ನಾಳೆ ಸಂಜೆ 5 ಗಂಟೆಗೆ ನಡೆಯಲಿದೆ. ರಾಜ್ಯಸಭೆಗೆ ಇತ್ತೀಚೆಗೆ ಆಯ್ಕೆಯಾದ ಕೇರಳದ ಮಾಜಿ ಮುಖ್ಯಮಂತ್ರಿ ಕೆ.ಕರುಣಾಕರನ್,ಅಬ್ದುಲ್ ರೆಹಮಾನ್ ಅಂತುಳೆ ಮತ್ತು ಡಾ. ಜಗನ್ನಾಥ್ ಮಿಶ್ರಾ ಅವರು ಸಂಪುಟ ಸೇರುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಸಿಬ್ಬಂದಿ, ಸಂಸದೀಯ ವ್ಯವಹಾರ ಮತ್ತು ಸಾರ್ವಜನಿಕ ಕುಂದುಕೊರತೆಗಳ ರಾಜ್ಯ ಸಚಿವೆ ಮಾರ್ಗರೇಟ್ ಆಳ್ವ ಅವರಿಗೆ ಸಂಪುಟ ದರ್ಜೆಗೆ ಬಡ್ತಿ ಸಿಗುವುದಾಗಿ ಹೇಳಲಾಗುತ್ತಿದೆ.
ಬಹುಗುಣ ಬಲವಂತದಿಂದ ಆಸ್ಪತ್ರೆಗೆ
ತೆಹ್ರಿ, ಜೂನ್ 9 (ಯುಎನ್‌ಐ):ತೆಹ್ರಿ ಅಣೆಕಟ್ಟು ಯೋಜನೆಯನ್ನು ಮರುವಿಮರ್ಶೆ ಮಾಡುವಂತೆ ಒತ್ತಾಯಿಸಿ ಕಳೆದ ಒಂದು ತಿಂಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಚಿಪ್ಕೊ ನಾಯಕ ಸುಂದರ್‌ಲಾಲ್ ಬಹುಗುಣ ಅವರನ್ನು ಇಂದು ಮುಂಜಾನೆ ಅವರ ನಿವಾಸದಿಂದ ಪೊಲೀಸರು ಎತ್ತಿಕೊಂಡು ಹೋದರು.
ಆಹಾರ ಸೇವಿಸುವಂತೆ ಒತ್ತಾಯಿಸಲು ಅವರನ್ನು ನವದೆಹಲಿಯ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆಗೆ ಸೇರಿಸಲಾಗಿದೆ. ಸರ್ಕಾರಿ ಆದೇಶದ ಮೇರೆಗೆ ಬಹುಗುಣ ಅವರನ್ನು ವಿಶೇಷ ಹೆಲಿಕಾಪ್ಟರ್‌ನಲ್ಲಿ ದೆಹಲಿಗೆ ಕರೆದೊಯ್ಯಲಾಗಿದೆ ಎಂದು ತೆಹ್ರಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಮಲ್ ದುಬೆ ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.