ADVERTISEMENT

25 ವರ್ಷಗಳ ಹಿಂದೆ | ಸೋಮವಾರ, 3–7–1995

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 19:30 IST
Last Updated 2 ಜುಲೈ 2020, 19:30 IST

ಪ್ರದೇಶ ಕಾಂಗೈ ಅಧ್ಯಕ್ಷತೆ ಒಮ್ಮತಕ್ಕೆ ಬರಲು ವಿಫಲ
ನವದೆಹಲಿ, ಜುಲೈ 2 (ಪಿಟಿಐ)–
ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಗೆ ನೂತನ ಅಧ್ಯಕ್ಷರನ್ನು ಆರಿಸುವ ವಿಷಯದಲ್ಲಿ ಪಕ್ಷದ ರಾಜ್ಯ ಘಟಕದ ನಾಯಕರು ಒಮ್ಮತಕ್ಕೆ ಬರುವಲ್ಲಿ ವಿಫಲರಾಗಿದ್ದಾರೆ.

ಕೇಂದ್ರದ ಮಾಜಿ ಸಚಿವ ಬಿ. ಶಂಕರಾ ನಂದ ಅವರ ನಿವಾಸದಲ್ಲಿ ಇಂದು ರಾತ್ರಿ ಎರಡು ಸುತ್ತು ಮಾತುಕತೆ ನಡೆಸಿದ ನಾಯಕರು ನಾಳೆ ಚರ್ಚೆ ಮುಂದುವರಿಸಲು ನಿರ್ಧರಿಸಿದರು. ನೂತನ ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಮಾಡುವ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ಅಧ್ಯಕ್ಷ ಹಾಗೂ ಪ್ರಧಾನಿ ಪಿ.ವಿ. ನರಸಿಂಹರಾವ್‌ ಅವರಿಗೆ ನಾಳೆ ನೀಡಲಾಗುವುದು. ಅಧ್ಯಕ್ಷ ಸ್ಥಾನಕ್ಕೆ ಜಾಫರ್‌ ಷರೀಫ್‌, ಶಂಕರಾನಂದ, ಎಸ್‌.ಎಂ.ಕೃಷ್ಣ, ಎಂ.ರಾಜಶೇಖರಮೂರ್ತಿ, ಬಿ.ಕೆ.ಗುಡದಿನ್ನಿ, ಡಿ.ಕೆ.ನಾಯ್ಕರ್‌, ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್‌ ಹೆಸರುಗಳು ಪ‍್ರಸ್ತಾಪಕ್ಕೆ ಬಂದಿವೆ ಎಂದು ಮೂಲಗಳು ಹೇಳಿವೆ.

ಜಿಲ್ಲೆಗೊಂದು ಮಹಿಳಾ ಠಾಣೆ ಸದ್ಯಕ್ಕಿಲ್ಲ
ಬೆಳಗಾವಿ, ಜುಲೈ 2–
ಈ ಮುಂಚೆ ಪ್ರಕಟಿಸಿದಂತೆ ಜಿಲ್ಲೆಗೊಂದು ಸಂಪೂರ್ಣ ಮಹಿಳಾ ಪೊಲೀಸ್‌ ಠಾಣೆಯನ್ನು ಒದಗಿಸಲು ಆಗದು ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಎಫ್‌ಟಿಆರ್‌ ಕೊಲಾಸೊ ಇಂದು ಇಲ್ಲಿ ತಿಳಿಸಿದರು.

ADVERTISEMENT

ವರದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ನೇಮಕಾತಿಗಳಿಗೆ ಅಗತ್ಯವಾದ ಮೀಸಲು ನೀತಿಯನ್ನು ಸರ್ಕಾರ ಇನ್ನೂ ರೂಪಿಸಿಲ್ಲವಾದ ಕಾರಣ ಎಲ್ಲ ನೇಮಕಗಳು ನಿಂತಿರುವುದೇ ಮಹಿಳಾ ಠಾಣೆಗಳ ಸ್ಥಾಪನೆ ವಿಳಂಬವಾಗಲು ಕಾರಣ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.