ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ | ಗುರುವಾರ, 30-11-1995

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 0:57 IST
Last Updated 30 ನವೆಂಬರ್ 2020, 0:57 IST
   

ಜಿ.ಪಂ. ಅಧ್ಯಕ್ಷರಿಗೆ ಪರಮಾಧಿಕಾರ

ಬೆಂಗಳೂರು, ನ. 29– ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷರುಗಳಿಗೆ ಕಾರ್ಯನಿರ್ವಹಣೆಯ ಪರಮಾಧಿಕಾರ ನೀಡುವ ಸಂಬಂಧದಲ್ಲಿ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ತಿದ್ದುಪಡಿ ಸುಗ್ರೀವಾಜ್ಞೆಯನ್ನು ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರು ಇಂದು ಹೊರಡಿಸಿದ್ದಾರೆ.

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗಿರುವ ಸದಸ್ಯರು ಶಾಸನ ಸಭೆಗಳು ಹಾಗೂ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆಗಳಲ್ಲೂ ಸದಸ್ಯತ್ವ ಹೊಂದಿದ್ದಲ್ಲಿ ಯಾವುದಾದರೂ ಒಂದು ಸ್ಥಾನ ಆಯ್ಕೆ ಮಾಡಿಕೊಂಡು ತಮ್ಮ ನಿರ್ಧಾರ ತಿಳಿಸಲು ಇದ್ದ ಕಾಲಾವಕಾಶವನ್ನು 15 ದಿನಗಳಿಂದ 90 ದಿನಗಳವರೆಗೆ ವಿಸ್ತರಿಸಲೂ ಈ ಸುಗ್ರೀವಾಜ್ಞೆಯು ಅವಕಾಶ ಕಲ್ಪಿಸಿದೆ.

ADVERTISEMENT

ವಾರದಲ್ಲಿ ವಿದ್ಯುತ್ ಕೊರತೆ ನಿವಾರಣೆ– ದೇವೇಗೌಡ

ಬೆಂಗಳೂರು, ನ. 29– ಮಹಾರಾಷ್ಟ್ರ, ತಮಿಳುನಾಡು ಮತ್ತು ಕೇಂದ್ರ ಗ್ರಿಡ್‌ನಿಂದ ಒಟ್ಟಾರೆಯಾಗಿ 700 ಮೆ.ವಾ.ನಷ್ಟು ಹೆಚ್ಚುವರಿ ವಿದ್ಯುತ್ ಲಭ್ಯವಾಗುವುದರಿಂದ ಇನ್ನು ಒಂದು ವಾರದಲ್ಲಿ ರಾಜ್ಯದ ಸಾಮಾನ್ಯ ಗ್ರಾಹಕರು, ಎಇಎಚ್‌ ಹಾಗೂ ಸಣ್ಣ ಕೈಗಾರಿಕೆಯವರಿಗೆ ಬೆಳಿಗ್ಗೆ ಮತ್ತು ಸಂಜೆ ವಿದ್ಯುತ್ ಕಡಿತ ಇರುವುದಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ದೇವೇಗೌಡ ಅವರು ಇಂದು ಇಲ್ಲಿ ತಿಳಿಸಿದರು.

ರಾಜ್ಯಕ್ಕೆ ನಿತ್ಯ 20 ದಶಲಕ್ಷ ಯೂನಿಟ್‌ಗಳಷ್ಟು ವಿದ್ಯುತ್ ಹೆಚ್ಚುವರಿಯಾಗಿ ಲಭ್ಯವಾಗಲಿದ್ದು, ವಿದ್ಯುತ್ ಕೊರತೆಯಿಂದ ಉಲ್ಬಣಿಸಿರುವ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.