ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಗೋಲಿಬಾರ್‌ಗೆ 11 ಬಲಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 19:30 IST
Last Updated 11 ಜುಲೈ 2022, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈನಲ್ಲಿ ಹಿಂಸಾಚಾರ: ಗೋಲಿಬಾರ್‌ಗೆ 11 ಬಲಿ

ಮುಂಬೈ, ಜುಲೈ 11 (ಪಿಟಿಐ, ಯುಎನ್‌ಐ)– ಇಲ್ಲಿನ ಚೆಂಬೂರಿನ ರಮಾಬಾಯಿ ಅಂಬೇಡ್ಕರ್‌ ನಗರದಲ್ಲಿ ಇಂದು ಬೆಳಗಿನ ಜಾವ ಹಿಂಸಾಕೃತ್ಯನಿರತ ಜನರ ಮೇಲೆ ಪೊಲೀಸರು ಗೋಲಿಬಾರ್‌ ನಡೆಸಿದ್ದರಿಂದ 11 ಜನರು ಸತ್ತರು.

ಸತ್ತವರಲ್ಲಿ ಎಂಟು ಜನರನ್ನು ಪೊಲೀಸರು ಗುರುತಿಸಿದ್ದಾರೆ. ಮೃತರಲ್ಲಿ ಒಂದು ಮಗು, ಇಬ್ಬರು ಮಹಿಳೆಯರು, ಇತರರು 14ರಿಂದ 40 ವರ್ಷ ವಯೋಮಾನದ ಒಳಗಿನವರು.

ADVERTISEMENT

‘ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್ ಅವರ ಪ್ರತಿಮೆಗೆ ಪಾದರಕ್ಷೆಯ ಹಾರ ಹಾಕಿದ್ದನ್ನು ನೋಡಿದ ಜನರು ಅಲ್ಲಿ ಗುಂಪು ಸೇರಿದರು. ಉದ್ರಿಕ್ತರು ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನು ನಿಲ್ಲಿಸಿ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚಲು ತೊಡಗಿದರು. ಅನಿಲ ಸಾಗಿಸುತ್ತಿದ್ದ
ಟ್ಯಾಂಕರ್ ಹಾಗೂ ಎರಡು ಬಸ್ಸು ಜನರ ಆಕ್ರೋಶದಿಂದ ಭಸ್ಮಗೊಂಡವು’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಮನೋಹರ್‌ ಜೋಶಿ ವಿಧಾನಸಭೆಗೆ ತಿಳಿಸಿದರು.

ಲಾಲೂ ನಿರೀಕ್ಷಣಾ ಜಾಮೀನಿಗೆ ನಕಾರ

ಪಟ್ನಾ, ಜುಲೈ 11 (ಪಿಟಿಐ, ಯುಎನ್‌ಐ)– ಮೇವು ಹಗರಣದಲ್ಲಿ ಆರೋಪಿಯಾಗಿರುವ ಬಿಹಾರದ ಮುಖ್ಯಮಂತ್ರಿ ಲಾಲೂ ಪ್ರಸಾದ್‌ ಯಾದವ್‌, ಅವರ ಇಬ್ಬರು ಸಚಿವ ಸಹೋದ್ಯೋಗಿಗಳು ಹಾಗೂ ಕೇಂದ್ರದ ಮಾಜಿ ಸಚಿವ ಚಂದ್ರದೇವ್‌ ಪ್ರಸಾದ್‌ ವರ್ಮಾ ಅವರಿಗೆ ಸಿಬಿಐನ ವಿಶೇಷ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಲು ಇಂದು ನಿರಾಕರಿಸಿತು.

ಮುಖ್ಯಮಂತ್ರಿ ಲಾಲೂ ಪ್ರಸಾದ್‌, ಕಾರ್ಮಿಕ ಸಚಿವ ವಿದ್ಯಾಸಾಗರ್‌ ನಿಶಾದ್‌, ಪಶು ಸಂಗೋಪನಾ ಸಚಿವ ಬೋಲಾ ರಾಂ ತೂಫಾನಿ ಹಾಗೂ ಕೇಂದ್ರದ ಮಾಜಿ ಸಚಿವ ಚಂದ್ರದೇವ್‌ ಪ್ರಸಾದ್‌ ವರ್ಮಾ ಅವರ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ ನ್ಯಾಯಾಧೀಶರು ‘ಮೇಲು ನೋಟಕ್ಕೆ ಆರೋಪಗಳು ಸ್ಪಷ್ಟವಾಗಿದ್ದು, ಈ ರಾಜಕಾರಣಿಗಳು ಹಗರಣದಲ್ಲಿ
ಭಾಗಿಯಾಗಿರುವುದನ್ನು ಸೂಚಿಸುತ್ತಿವೆ’ ಎಂದರು.

ರಕ್ಷಣೆ ಭರವಸೆ: ಲಾಲೂ ಪ್ರಸಾದ್‌ ಯಾದವ್‌ ಅವರೂ ಸೇರಿದಂತೆ ಮೇವು ಹಗರಣದಲ್ಲಿ ಆರೋಪಿಗಳಾಗಿರುವ ರಾಜಕೀಯ ಮುಖಂಡರನ್ನು ಬಂಧಿಸುವ ಸಿಬಿಐ ಅಧಿಕಾರಿಗಳಿಗೆ ಸೂಕ್ತ ರಕ್ಷಣೆ ಒದಗಿಸಲಾಗುವುದು ಎಂದು ಪಟ್ನಾ ಹೈಕೋರ್ಟ್‌ಗೆ ಬಿಹಾರ ಸರ್ಕಾರವು ಇಂದು ಭರವಸೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.