ADVERTISEMENT

25 ವರ್ಷಗಳ ಹಿಂದೆ: 28–01–1997, ಮಂಗಳವಾರ

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 19:30 IST
Last Updated 27 ಜನವರಿ 2022, 19:30 IST
   

ಬೊಫೋರ್ಸ್‌: ಮೂರು ತಿಂಗಳಲ್ಲಿತನಿಖೆ ಪೂರ್ಣ

ನವದೆಹಲಿ, ಜ. 27 (ಯುಎನ್‌ಐ, ಪಿಟಿಐ)– ಬೊಫೋರ್ಸ್‌ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಂಗ್ರಹಿಸಿರುವ ದಾಖಲೆಯಲ್ಲಿನ ರಹಸ್ಯ ಸಂಕೇತಗಳನ್ನು ಬಿಡಿಸಿ ಆರೋಪಿಗಳ ಹೆಸರನ್ನು ಪತ್ತೆ ಹಚ್ಚುವ ಕಾರ್ಯ ಭರದಿಂದ ನಡೆದಿದೆ. ಈ ನಡುವೆ, ಹಗರಣದ ತನಿಖೆಯನ್ನು 3 ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಸಿಬಿಐ ನಿರ್ದೇಶಕ ಜೋಗಿಂದರ್‌ ಸಿಂಗ್‌ ಅವರು ತಿಳಿಸಿದ್ದಾರೆ.

ಸ್ವಿಸ್‌ ಬ್ಯಾಂಕಿನಿಂದ ಪಡೆಯಲಾದ 500ಕ್ಕೂ ಹೆಚ್ಚು ದಾಖಲೆಗಳನ್ನು ಪರಿಶೀಲಿಸುವ ಕಾರ್ಯ ವಾರಾಂತ್ಯಕ್ಕೆ ಪೂರ್ಣ
ಗೊಳ್ಳುವ ಸಾಧ್ಯತೆ ಇದೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ದಾಖಲೆಗಳು ಜರ್ಮನ್‌, ಫ್ರೆಂಚ್‌ ಮತ್ತು ಸ್ವಿಸ್‌ ಲಿಪಿಗಳಲ್ಲಿ ಇರುವುದರಿಂದ ಅವುಗಳ ಅರ್ಥ ತಿಳಿಯಲು ಸಿಬಿಐ ಕೇಂದ್ರ ಸಚಿವಾಲಯದ ಭಾಷಾ ತಜ್ಞರ ನೆರವನ್ನು ಪಡೆಯುತ್ತಿದೆ ಎಂದು ಮೂಲಗಳು ಹೇಳಿವೆ. ಈ ಮಧ್ಯೆ ನಿರ್ದೇಶಕರು ಸೇರಿದಂತೆ ಸಿಬಿಐನ ಕೆಲವು ಹಿರಿಯ ಅಧಿಕಾರಿಗಳು ನಿನ್ನೆ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ ಬೊಫೋರ್ಸ್‌ ಮತ್ತು ಇತರ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು ಎಂದು ಮೂಲಗಳು ಹೇಳಿವೆ.

ADVERTISEMENT

ಉದ್ಯೋಗ ಆಧರಿತ ಶಿಕ್ಷಣ: ಪಟೇಲ್‌ ಪ್ರತಿಪಾದನೆ

ಬೆಂಗಳೂರು, ಜ. 27– ಉದ್ಯೋಗ ಕಲ್ಪಿಸುವಂಥ ಶಿಕ್ಷಣ ಇಂದಿನ ಅಗತ್ಯವಾಗಬೇಕು ಎಂದು ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಅವರು ಇಂದು ಇಲ್ಲಿ ಅಭಿಪ್ರಾಯಪಟ್ಟರು.

ವಿಶ್ವ ಬ್ಯಾಂಕಿನ ನೆರವಿನ ಯೋಜನೆಯಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ತಾಂತ್ರಿಕ ಮುದ್ರಣ ಸಂಸ್ಥೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಮಾನವನ ಒಳಿತಿಗಾಗಿ, ಜ್ಞಾನಕ್ಕಾಗಿ ಶಿಕ್ಷಣವನ್ನು ಆಶ್ರಯಿಸುವವರು ಕೆಲವೇ ಮಂದಿ, ಪ್ರತಿಯೊಬ್ಬರೂ ಉದ್ಯೋಗಕ್ಕೆ ಮಾರ್ಗ ಕಲ್ಪಿಸುತ್ತದೆ ಎಂದಷ್ಟೇ ಶಿಕ್ಷಣವನ್ನು ಆಶ್ರಯಿಸುತ್ತಾರೆ. ಹಾಗಾಗಿ ಇಂದು ಉದ್ಯೋಗ ಕಲ್ಪಿಸುವ ಶಿಕ್ಷಣ ನೀಡುವ ಸಂಸ್ಥೆಗಳ ಅಗತ್ಯವಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.