ADVERTISEMENT

25 ವರ್ಷಗಳ ಹಿಂದೆ ಈ ದಿನ: ಶಬರಿಮಲೆಯಲ್ಲಿ ದುರಂತ– 51 ಭಕ್ತರ ದುರ್ಮರಣ

ಪ್ರಜಾವಾಣಿ ವಿಶೇಷ
Published 14 ಜನವರಿ 2024, 20:40 IST
Last Updated 14 ಜನವರಿ 2024, 20:40 IST
<div class="paragraphs"><p>25 ವರ್ಷಗಳ ಹಿಂದೆ&nbsp;ಈ ದಿನ</p></div>

25 ವರ್ಷಗಳ ಹಿಂದೆ ಈ ದಿನ

   

ಶುಕ್ರವಾರ: 15–01–1999

ಶಬರಿಮಲೆಯಲ್ಲಿ ದುರಂತ– 51 ಭಕ್ತರ ದುರ್ಮರಣ

ADVERTISEMENT

ಶಬರಿಮಲೆ, ಜ. 14 (ಪಿಟಿಐ, ಯುಎನ್ಐ)– ಇಲ್ಲಿಗೆ ಸಮೀಪದ ಪಂಬಾ ಬೆಟ್ಟದ ಮೇಲೆ ಸಂಭವಿಸಿದ ನೂಕುನುಗ್ಗಲು ಹಾಗೂ ಭೂಕುಸಿತದಲ್ಲಿ ಕನಿಷ್ಠ 51 ಮಂದಿ ಅಯ್ಯಪ್ಪ ಭಕ್ತರು ಸತ್ತಿದ್ದು, 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಸತ್ತವರಲ್ಲಿ ನಾಲ್ವರು ಮಕ್ಕಳು ಹಾಗೂ ಒಬ್ಬ ಮಹಿಳೆಯೂ ಸೇರಿದ್ದಾರೆ.

‘ಮಕರ ಜ್ಯೋತಿ’ಯ ದರ್ಶನ ಪಡೆದು ಪಂಬಾಕ್ಕೆ ಭಕ್ತಾದಿಗಳು ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿತು.

ಪಂಬಾದಿಂದ ಸನ್ನಿಧಾನದವರೆಗಿನ ಏಳು ಕಿ.ಮೀ. ಉದ್ದದ ದಾರಿಯಲ್ಲಿ ಭಕ್ತಾದಿಗಳು ಕಿಕ್ಕಿರಿದು ತುಂಬಿದ್ದರಿಂದ ಜ್ಯೋತಿಯ ದರ್ಶನ ಪಡೆಯಲು ಕೆಲವರು ಹತ್ತಿರದ ಗುಡ್ಡ ಹತ್ತಿದರು. ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ನೂಕುನುಗ್ಗಲಿನಿಂದ ಗುಡ್ಡದ ಒಂದು ಭಾಗ ಕುಸಿಯಿತು. ಭೂಕುಸಿತದಿಂದಾಗಿ 60 ಅಡಿ ಎತ್ತರದಿಂದ ಕೆಳಗೆ ಬಿದ್ದ ಕೆಲ ಭಕ್ತಾದಿಗಳು ಮಣ್ಣಿನಡಿಯಲ್ಲಿ ಹೂತುಹೋದರು ಎಂದು ವರದಿಗಳು ತಿಳಿಸಿವೆ.

ಭಕ್ತರ ಗುಂಪನ್ನು ನಿಯಂತ್ರಿಸಲು ಕಟ್ಟಿದ್ದ ಹಗ್ಗ ತುಂಡಾಗಿ ಈ ದುರಂತ ಸಂಭವಿಸಿದೆ ಎಂದು ಮತ್ತೊಂದು ವರದಿ ತಿಳಿಸಿದೆ.

ಮೃತಪಟ್ಟವರ ಪೈಕಿ ಇದುವರೆಗೆ ಗುರುತಿಸಲಾಗಿರುವವರಲ್ಲಿ ಕೇರಳ, ಆಂಧ್ರಪ್ರದೇಶ, ತಮಿಳುನಾಡಿನಿಂದ ಬಂದ ಭಕ್ತರು ಸೇರಿದ್ದಾರೆ.

ರಾಜ್ಯ ವಿಧಾನಸಭೆ ಉಪಾಧ್ಯಕ್ಷ ಚಂದ್ರಶೇಖರ ಮಾಮನಿ ನಿಧನ

ಬೆಳಗಾವಿ, ಜ. 14– ರಾಜ್ಯ ವಿಧಾನಸಭೆ ಉಪಾಧ್ಯಕ್ಷ ಮತ್ತು ಸವದತ್ತಿ ಕ್ಷೇತ್ರದ ಶಾಸಕ ಚಂದ್ರಶೇಖರ ಮಾಮನಿ (62) ಇಂದು ಬೆಳಿಗ್ಗೆ ಸವದತ್ತಿಯ ತಮ್ಮ ಮನೆಯಲ್ಲಿ ತೀವ್ರ ಹೃದಯಾಘಾತದ ನಂತರ ನಿಧನರಾದರು.

ಬೆಂಗಳೂರಿನಿಂದ ಕಿತ್ತೂರು ರಾಣಿ ಚನ್ನಮ್ಮ ರೈಲಿನಲ್ಲಿ ಹುಬ್ಬಳ್ಳಿಗೆ ಬಂದು ಕಾರಿನಲ್ಲಿ ಸವದತ್ತಿಗೆ ಬರುತ್ತಿರುವಾಗಲೇ ಮಾರ್ಗ ಮಧ್ಯದಲ್ಲಿ ಅವರು ಎದೆನೋವು ಅನುಭವಿಸಿದರು. ಅವರ ಕಾರು ಧಾರವಾಡಕ್ಕೆ ಬರುವ ವೇಳೆಗೆ ನೋವು ತೀವ್ರವಾಯಿತು. ‘ವೈದ್ಯರ ಬಳಿ ಹೋಗೋಣ’ ಎಂದು ಜೊತೆಗಿದ್ದ ಗನ್‌ಮ್ಯಾನ್ ಹೇಳಿದರೂ ಮಾಮನಿಯವರು ಊರಿಗೆ ತೆರಳಿದರು.

ಚಿಕ್ಕಮಗಳೂರಿನಲ್ಲಿ ಬಂಡಾಯ: ದಳ ನಾಯಕರ ಸಾಮೂಹಿಕ ರಾಜೀನಾಮೆ

ಚಿಕ್ಕಮಗಳೂರು, ಜ. 14– ಪ್ರದೇಶ ಜನತಾದಳ ಅಧ್ಯಕ್ಷ ಸ್ಥಾನದಿಂದ ಸಕಾರಣ ಇಲ್ಲದೆ ಬಿ.ಎಲ್.ಶಂಕರ್ ಅವರನ್ನು ಕೈಬಿಟ್ಟ ಕ್ರಮವನ್ನು ಪ್ರತಿಭಟಿಸಿ ಜಿಲ್ಲಾ ಜನತಾದಳ ಘಟಕದ ಅಧ್ಯಕ್ಷ, ಪದಾಧಿಕಾರಿಗಳು, ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳ ಅಧ್ಯಕ್ಷ, ಪದಾಧಿಕಾರಿಗಳು ಇಂದು ರಾಜೀನಾಮೆ ನೀಡಿದ್ದಾರೆ. ಜಿಲ್ಲೆಯ ಸಚಿವ ಬಿ.ಬಿ.ನಿಂಗಯ್ಯ ಹಾಗೂ ಶಾಸಕರು ಈ ತೀರ್ಮಾನವನ್ನು ಅನುಮೋದಿಸಿದ್ದಾರೆ.

ಜಿಲ್ಲಾ ಜನತಾದಳ ಘಟಕದ ಪ್ರಮುಖರ ಸಭೆ ಬಳಿಕ ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಎಚ್.ಟಿ.ರಾಜೇಂದ್ರ ಅವರು ಈ ವಿಷಯ ತಿಳಿಸಿದರು.

ಚಿಕ್ಕಮಗಳೂರು ತಾಲ್ಲೂಕು ಘಟಕದ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಟಿ.ಡಿ.ರಾಜೇಗೌಡ ನಿನ್ನೆಯೇ ತಮ್ಮ ಬೆಂಬಲಿಗ ರೊಂದಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.