ADVERTISEMENT

ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ಕುರಿತು ಗೊತ್ತುವಳಿ: ಪಾಕಿಸ್ತಾನಕ್ಕೆ ಸಿಗದ ಬೆಂಬಲ

ಬುಧವಾರ, 9–11–1994

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 20:00 IST
Last Updated 8 ನವೆಂಬರ್ 2019, 20:00 IST
   

ಕಾಶ್ಮೀರ ಪ್ರಶ್ನೆ: ಪಾಕಿಸ್ತಾನದನಿರ್ಣಯ ಮತ್ತೆ ಮುಂದಕ್ಕೆ
ವಿಶ್ವಸಂಸ್ಥೆ, ನ. 8– (ಯುಎನ್‌ಐ, ಪಿಟಿಐ)– ವಿಶ್ವಸಂಸ್ಥೆ ಮಹಾಸಭೆಯ ಪ್ರಧಾನ ರಾಜಕೀಯ ಸಮಿತಿಯಲ್ಲಿ ಕಾಶ್ಮೀರದ ಕುರಿತು ಗೊತ್ತುವಳಿಯನ್ನು ಮಂಡಿಸುವ ಪ್ರಯತ್ನದಲ್ಲಿ ಪಾಕಿಸ್ತಾನಕ್ಕೆ ಸಾಕಷ್ಟು ಬೆಂಬಲ ದೊರೆಯದೆ ಮತ್ತೆ ವಿಫಲವಾಯಿತು.

ಈ ನಿರ್ಣಯ ಮಂಡಿಸಲು ಪಾಕಿಸ್ತಾನದ ಪರವಾಗಿ ಶತಪ್ರಯತ್ನ ನಡೆಸುತ್ತಿರುವ ಇಸ್ಲಾಮಿಕ್‌ ದೇಶಗಳ ಸಂಘದ ‘ಸಂಪರ್ಕ ತಂಡ’ವು ಕಳೆದ 4 ದಿನಗಳಲ್ಲಿ ನಿನ್ನೆ ಎರಡನೇ ಬಾರಿಗೆ ಸೋಲು ಅನುಭವಿಸಿತು.

‘40 ಕೋಟಿ ರೂ.ಗೆ ಐಟಿಸಿಗೆ ದೇಶದ ಆರೋಗ್ಯ ಮಾರಾಟ’
ನವದೆಹಲಿ, ನ. 8 (ಪಿಟಿಐ)– ‘ವಿಶ್ವಕಪ್‌ ಕ್ರಿಕೆಟ್ ಪಂದ್ಯಾವಳಿಯ ಪ್ರಾಯೋಜನೆಯನ್ನು ಐಟಿಸಿ ಕಂಪನಿಗೆ ನೀಡುವ ಮೂಲಕ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಲಿ (ಬಿಸಿಸಿಐ) ದೇಶದ ಆರೋಗ್ಯವನ್ನೇ 40 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದೆ’ ಎಂದು ಭಾರತ ಹೃದಯ ಶುಶ್ರೂಷೆ ಪ್ರತಿಷ್ಠಾನ (ಹಾರ್ಟ್‌ ಕೇರ್ ಫೌಂಡೇಷನ್ ಆಫ್ ಇಂಡಿಯಾ) ಇಂದು ಇಲ್ಲಿ ಹೇಳಿದೆ.

ADVERTISEMENT

‘ಈಚೆಗೆ ಮುಕ್ತಾಯವಾದ ವಿಲ್ಸ್ ತ್ರಿಕೋನ ಸರಣಿಯನ್ನು ಕ್ರಿಕೆಟ್ ಮಂಡಲಿ ಬೆಂಬಲಿಸಿರುವುದಲ್ಲದೆ ಕೆಲವು ಮುಖ್ಯಮಂತ್ರಿಗಳು ಕೂಡಾ ವಿಲ್ಸ್ ಕಟ್ಟೆಯ ಮೇಲೆ ನಿಂತು ಟ್ರೋಫಿಗಳನ್ನು ನೀಡಿದ್ದಾರೆ. ಇದು ತೀರಾ ವಿಷಾದನೀಯ’ ಎಂದು ಪತ್ರಿಕಾ ಹೇಳಿಕೆಯೊಂದರಲ್ಲಿ ಪ್ರತಿಷ್ಠಾನ ತಿಳಿಸಿದೆ.

ಭಾರತ ತಂಡದ ಆಟಗಾರರು ಮತ್ತು ಅಂಪೈರುಗಳು ‘ವಿಲ್ಸ್’ ಎಂಬ ಹೆಸರಿನ ಬ್ಯಾಡ್ಜ್‌ಗಳನ್ನು ತಮ್ಮ ಬಟ್ಟೆಬರೆಗಳಲ್ಲಿ ಧರಿಸುವಂತೆ ಮಾಡಲಾಗಿದೆ. ಇದರಿಂದಾಗಿ, ಇಂತಹ ಸಿಗರೇಟ್ ಮಾತ್ರ ಸಚಿನ್ ತೆಂಡೂಲ್ಕರ್ ಅವರಂತಹ ಆಟಗಾರರನ್ನು ರೂಪಿಸಬಹುದು ಎಂಬ ಭ್ರಮೆ ಆಟವನ್ನು ವೀಕ್ಷಿಸುವ ಮುಗ್ಧ ಮಕ್ಕಳು ಮತ್ತಿತರ ಜನರನ್ನು ಆವರಿಸುತ್ತದೆ ಎಂದು ಹೇಳಿದೆ.

ಪಠ್ಯದಲ್ಲಿ ಮಾನವ ಹಕ್ಕು
ನವದೆಹಲಿ, ನ. 8 (ಯುಎನ್‌ಐ)– ಮಾನವ ಹಕ್ಕು ವಿಷಯವನ್ನು ಶಾಲಾ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಪಠ್ಯದಲ್ಲಿ ಸೇರಿಸಲಾಗುವುದು ಎಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ರಂಗನಾಥ್‌ ಮಿಶ್ರಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.