
25 ವರ್ಷಗಳ ಹಿಂದೆ ಈ ದಿನ
ಹಳ್ಳಿಗಳಿಗೆ ಭೇಟಿ: ಪೊಲೀಸರಿಗೆ ಮುಖ್ಯಮಂತ್ರಿ ಸೂಚನೆ
ಬೆಂಗಳೂರು, ಜ. 8– ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕು ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ಇಂದು ಇಲ್ಲಿ ಸೂಚಿಸಿದರು.
ಇಲ್ಲಿನ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಏರ್ಪಡಿಸಿದ್ದ ರಾಜ್ಯದ ಎಲ್ಲ ಐಪಿಎಸ್ ಅಧಿಕಾರಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
‘ಜಿಲ್ಲಾಧಿಕಾರಿಗಳು ಭೇಟಿ ನೀಡುವ ಹಾಗೆ ಎಸ್‌ಪಿಗಳೂ ಹಳ್ಳಿಗಳಿಗೆ ಭೇಟಿ ನೀಡಿದರೆ ಒಳ್ಳೆಯದು’ ಎಂದು ತಾಕೀತು ಮಾಡಿದರು.
ಭೂಗತ ಜಗತ್ತಿನ ಸಂಪರ್ಕ: ಭರತ್ ಷಾ ಬಂಧನ
ಮುಂಬೈ, ಜ. 8 (ಪಿಟಿಐ)– ಭೂಗತ ಜಗತ್ತಿನೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ ಎಂಬ ಬಗ್ಗೆ ಖಚಿತ ಸಾಕ್ಷ್ಯ ದೊರೆತ ಹಿನ್ನೆಲೆಯಲ್ಲಿ ಹಿಂದಿ ಚಿತ್ರ ಜಗತ್ತಿನ ಪ್ರಖ್ಯಾತ ಹಣಕಾಸು ಪೂರೈಕೆದಾರ ಮತ್ತು ವಜ್ರದ ಉದ್ಯಮಿ ಭರತ್ ಷಾ ಅವರನ್ನು ಇಂದು ಇಲ್ಲಿ ಬಂಧಿಸಲಾಗಿದ್ದು, ಅವರನ್ನು ಜನವರಿ 18ರ ತನಕ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಷಾ ಅವರು ಕರಾಚಿ ಮೂಲದ ಭೂಗತ ದೊರೆ ಛೋಟಾ ಶಕೀಲ್ ಜತೆಗೆ ದೂರವಾಣಿ ಮೂಲಕ ನಡೆಸಿದ ಮಾತುಕತೆಗಳ ಧ್ವನಿಸುರುಳಿ ಲಭ್ಯವಾದ ಕಾರಣ ಅವರನ್ನು ಬಂಧಿಸಲಾಗಿದೆ ಎಂದು ಮಹಾರಾಷ್ಟ್ರದ ಗೃಹ ಸಚಿವ ಛಗನ್ ಭುಜಬಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.