ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ: ಸೋಮವಾರ 9–10–1995

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 19:30 IST
Last Updated 8 ಅಕ್ಟೋಬರ್ 2020, 19:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಅಧಿಕಾರ ಬಿಡಲು ಕೇಶುಭಾಯಿಗೆ ಸೂಚನೆ

ನವದೆಹಲಿ, ಅ. 8 (ಯುಎನ್‌ಐ, ಪಿಟಿಐ)– ಗುಜರಾತ್ ಬಿಜೆಪಿಯಲ್ಲಿ ಮತ್ತೆ ಬಿಕ್ಕಟ್ಟಿನ ಲಕ್ಷಣಗಳು ಕಂಡುಬಂದಿವೆ. ನಿನ್ನೆ ಸಂಧಾನದ ಫಲವಾಗಿ ಭಿನ್ನಮತ ಶಮನಗೊಂಡು ವಿಧಾನಸಭೆಯಲ್ಲಿ ವಿಶ್ವಾಸಮತ ಗಳಿಸಲು ಸಫಲರಾದ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಅವರನ್ನು ಅಧಿಕಾರದಿಂದ ಇಳಿಸಿದರೆ ಬಂಡಾಯ ಏಳುವುದಾಗಿ ಪಟೇಲ್ ಬೆಂಬಲಿಗರು ಬಿಜೆಪಿ ವರಿಷ್ಠ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ.

ಆದರೆ, ಇದಕ್ಕೆ ಸೊಪ್ಪು ಹಾಕದ ಬಿಜೆಪಿ ಸಂಸದೀಯ ಪಕ್ಷ ಇಂದು ಇಲ್ಲಿ ಸಭೆ ಸೇರಿ ಹೊಸ ಮುಖ್ಯಮಂತ್ರಿ ಆಯ್ಕೆಗೆ ಅನುವು ಮಾಡಿಕೊಡಲು ಅಧಿಕಾರದಿಂದ ಇಳಿಯುವಂತೆ ಕೇಶುಭಾಯಿಗೆ ಸೂಚಿಸಿತು. ಅಲ್ಲದೆ ಭಿನ್ನ ಬಣದ ನಾಯಕ ಶಂಕರ ಸಿನ್ಹ ವಘೇಲಾ ಅವರ ಉಚ್ಚಾಟನೆ ಆದೇಶ ರದ್ದುಪಡಿಸಿತು.

ADVERTISEMENT

ಪಂಪ್‌ಸೆಟ್‌ಗೆ ಕನಿಷ್ಠ 300 ರೂ. ಶುಲ್ಕ– ಪಟೇಲ್ ಇಂಗಿತ

ರಾಯಚೂರು, ಅ. 8– ನೀರಾವರಿ ಪಂಪ್‌ಸೆಟ್‌ಗಳ ಮೇಲೆ ಶುಲ್ಕ ವಿಧಿಸಲು ಸರ್ಕಾರ ತಾತ್ವಿಕವಾಗಿ ಒಪ್ಪಿಕೊಂಡಿದ್ದು ಪ್ರತೀ ಅಶ್ವಶಕ್ತಿಗೆ (ಎಚ್‌ಪಿ) ಒಂದು ವರ್ಷಕ್ಕೆ ಕನಿಷ್ಠ 300 ರೂಪಾಯಿ ಶುಲ್ಕ ವಿಧಿಸುವ ಇಂಗಿತವನ್ನು ಉಪಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ಇಂದು ಇಲ್ಲಿ ವ್ಯಕ್ತಪಡಿಸಿದರು.

ಇಲ್ಲಿಗೆ ಸಮೀಪದ ಶಕ್ತಿನಗರದಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ರಾಜ್ಯದಲ್ಲಿ 10 ಲಕ್ಷ ನೀರಾವರಿ ಪಂಪ್‌ಸೆಟ್‌ಗಳಿವೆ. ಕೃಷಿ ಬಳಕೆ ವಿದ್ಯುತ್ ಮೇಲೆ ಶುಲ್ಕ ವಿಧಿಸಲು ಸರ್ಕಾರ ತೀರ್ಮಾನಿಸಿದೆ. ಇದು ಮುಂದಿನ ತಿಂಗಳಿಂದ ಜಾರಿಗೆ ಬರಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.