4 ಪಕ್ಷಗಳೊಂದಿಗೆ ಹೊಂದಾಣಿಕೆ
ಹಾಸನ, ಆ. 19– ಬಹುಜನ ಸಮಾಜ ಪಕ್ಷ, ಎಡಪಕ್ಷಗಳು ಹಾಗೂ ಮಹಾರಾಷ್ಟ್ರದಲ್ಲಿ ಶರದ್ ಪವಾರ್ ನೇತೃತ್ವದ ಕಾಂಗ್ರೆಸ್ ಪಕ್ಷ, ತಮಿಳುನಾಡಿನಲ್ಲಿ ತಮಿಳು ಮಾನಿಲ ಕಾಂಗ್ರೆಸ್ ಹೊರತುಪಡಿಸಿ, ಜನತಾದಳ (ಎಸ್) ಪಕ್ಷ ಬೇರಾವ ಪಕ್ಷಗಳೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಇಂದು ಇಲ್ಲಿ ಸ್ಪಷ್ಟಪಡಿಸಿದರು.
ಹಾಸನ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ಸಮಾನ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಕಳೆದ ಜುಲೈ 14ರಂದು ರಾಜ್ಯ ಕಾರ್ಯಕಾರಿಣಿ ಕೈಗೊಂಡ ನಿರ್ಣಯಕ್ಕೆ ಈಗಲೂ ತಮ್ಮ ಪಕ್ಷ ಕಟಿಬದ್ಧ
ವಾಗಿದೆ ಎಂದು ಅವರು ನುಡಿದರು.
ಅಮೇಥಿಯಿಂದಲೂ ಸೋನಿಯಾ ಸ್ಪರ್ಧೆ
ನವದೆಹಲಿ, ಆ. 19– ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವಲ್ಲಿ ರಹಸ್ಯ ಕಾಯ್ದುಕೊಳ್ಳಲು ಹೋಗಿ ನಗೆಪಾಟಲಿಗೆ ಗುರಿಯಾದ ಕಾಂಗ್ರೆಸ್ ಪಕ್ಷ, ಸೋನಿಯಾ ಗಾಂಧಿ ಅವರು ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದಲೂ ಸ್ಪರ್ಧೆಗೆ ಇಳಿಯುವುದಾಗಿ ಅಧಿಕೃತವಾಗಿ ಪ್ರಕಟಿಸಿತು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಣಬ್ ಕುಮಾರ್ ಮುಖರ್ಜಿ ಈ ವಿಷಯವನ್ನು ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಅವರು ಮತ್ತೆ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ವರದಿಗಾರರ ಪ್ರಶ್ನೆಗೆ, ಮತ್ತೆ ಬೇರಾವ ಕ್ಷೇತ್ರವೂ ಇಲ್ಲ. ಈಗಾಗಲೇ ಬಳ್ಳಾರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರಲ್ಲವೇ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.