ಕೇಂದ್ರದ ಸೂಚನೆ ಅನ್ವಯ 6 ಟಿಎಂಸಿ ನೀರು ಬಿಡುಗಡೆ
ಬೆಂಗಳೂರು, ಜುಲೈ 16– ‘ಮುಂದಿನ 30 ದಿನಗಳ ಒಳಗೆ ತಮಿಳುನಾಡಿಗೆ ಬಿಡಬೇಕಾಗಿರುವ ಕಾವೇರಿ ನೀರಿನ ಪ್ರಮಾಣ ಕುರಿತು ಕೇಂದ್ರ ಸರ್ಕಾರದ ಸಂಪುಟ ಕಾರ್ಯದರ್ಶಿ ನೀಡಿರುವ ಹೇಳಿಕೆಗೆ ಕರ್ನಾಟಕ ಬದ್ಧವಾಗಿದೆ’ ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇಂದು ಇಲ್ಲಿ ಹೇಳಿದರು.
ನೀರು ಬಿಡುವುದಕ್ಕೆ ಸಂಬಂಧಿಸಿದಂತೆ ‘ಯಾವುದೇ ಕಾರಣಕ್ಕೂ ರಾಜ್ಯದ ರೈತರ ಹಿತವನ್ನು ಬಲಿಕೊಡುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
ಕಳೆದ ವಾರ ಬಾಂಬ್ ಸ್ಫೋಟಗೊಂಡು ಜನರನ್ನು ಆತಂಕಕ್ಕೀಡು ಮಾಡಿದ್ದ ಜಗಜೀವನರಾಂ ನಗರದ ಸೇಂಟ್ ಪೀಟರ್ ಮತ್ತು ಪಾಲ್ ಚರ್ಚ್‌ನಲ್ಲಿ ಏರ್ಪಡಿಸಿದ್ದ ಸೌಹಾರ್ದ ಸಭೆಯ ನಂತರ ಸುದ್ದಿಗಾರರರ ಜತೆ ಅವರು ಮಾತನಾಡಿದರು.
ಸರ್ಕಾರ ವಜಾಕ್ಕೆ ಕೇಂದ್ರಕ್ಕೆ ಒತ್ತಾಯ: ಠಾಕ್ರೆ ಬೆದರಿಕೆ
ಮುಂಬೈ, ಜುಲೈ 16– (ಪಿಟಿಐ, ಯುಎನ್‌ಐ)– ‘ರಾಜ್ಯ ಸರ್ಕಾರವು ನನ್ನನ್ನು ವಿಚಾರಣೆಗೆ ಒಳಪಡಿಸಲು ಐಪಿಸಿ 153 (ಎ) ಕಲಮಿನನ್ವಯ ಮುಂದುವರಿದರೆ ಕಾಂಗ್ರೆಸ್, ಎನ್‌ಸಿಪಿ ಪ್ರಜಾಸತ್ತಾತ್ಮಕ ರಂಗ (ಡಿಎಫ್) ಸರ್ಕಾರವನ್ನು ವಜಾ ಮಾಡಲು ಸಂವಿಧಾನದ 356ನೇ ವಿಧಿಯನ್ವಯ ಕ್ರಮ ಕೈಗೊಳ್ಳಬೇಕೆಂದು ನಾನು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ’ ಎಂದು ಶಿವಸೇನಾ ಮುಖ್ಯಸ್ಥ ಬಾಳ ಠಾಕ್ರೆ, ತಮ್ಮ ಸ್ವಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಎಂಟು ವರ್ಷಗಳಷ್ಟು ಹಳೆಯದಾದ ಪ್ರಕರಣದ ವಿಚಾರಣೆಗೆ ಆದೇಶ ನೀಡುವ ಮೂಲಕ ರಾಜ್ಯ ಸರ್ಕಾರವು ಪ್ರತೀಕಾರದ ಧೋರಣೆ ಪ್ರದರ್ಶಿಸಿದೆ. ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ಅದಕ್ಕೆ ರಾಜ್ಯ ಸರ್ಕಾರವೇ ಸಂಪೂರ್ಣ ಹೊಣೆಯಾಗಬೇಕಾಗುತ್ತದೆ’ ಎಂದು ಠಾಕ್ರೆ ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.