ADVERTISEMENT

25 ವರ್ಷಗಳ ಹಿಂದೆ: ಭಾನುವಾರ, 16 ಮಾರ್ಚ್ 1997

ಪ್ರಜಾವಾಣಿ ವಿಶೇಷ
Published 15 ಮಾರ್ಚ್ 2022, 18:45 IST
Last Updated 15 ಮಾರ್ಚ್ 2022, 18:45 IST
   

₹268 ಕೋಟಿ ಯೋಜನೆ ಜಾರಿಯಲ್ಲಿ ರಾಜ್ಯದ ವಿಳಂಬ
ನವದೆಹಲಿ, ಮಾ. 15–
ಕರ್ನಾಟಕದ 29 ಪಟ್ಟಣಗಳಿಗೆ ಮುಖ್ಯವಾಗಿ ಕುಡಿಯುವ ನೀರು ಪೂರೈಕೆ ಮತ್ತು ಇತರ ನಾಗರಿಕ ಸೌಲಭ್ಯ ಒದಗಿಸಲು ಒಟ್ಟು ₹268.76 ಕೋಟಿ ಯೋಜನೆಯನ್ನು ಮಂಜೂರು ಮಾಡಲಾಗಿದೆ. ಆದರೆ ರಾಜ್ಯ ಸರ್ಕಾರ ಮತ್ತು ಸಂಬಂಧಿಸಿದ ಸಂಸ್ಥೆಗಳು ಅವಶ್ಯ ಮಾಹಿತಿಯನ್ನು ಪೂರೈಸುವ ಜತೆಗೆ ಗ್ಯಾರಂಟಿ ನೀಡಿ ಈ ಯೋಜನೆಯ ಲಾಭವನ್ನು ಪಡೆಯಲು ರಾಜ್ಯದಿಂದ ಇನ್ನೂ ಸಾಧ್ಯವಾಗಿಲ್ಲ.

ನಗರ ವ್ಯವಹಾರಗಳ ರಾಜ್ಯ ಸಚಿವ ಡಾ. ಯು.ವೆಂಕಟೇಶ್ವರಲು ಅವರು ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಎಚ್‌.ಹನುಮಂತಪ್ಪ ಅವರಿಗೆ ಲಿಖಿತ ಉತ್ತರ ನೀಡಿ ತಿಳಿಸಿದ್ದಾರೆ.

ಇದರ ಜತೆಗೆ ವಸತಿ ಯೋಜನೆ, ಬೆಂಗಳೂರು ಮಹಾನಗರ ಯೋಜನೆ ಹಾಗೂ ಇತರ ನಗರ ಪ್ರದೇಶಗಳ ಅಭಿವೃದ್ಧಿಗಾಗಿ ₹436.85 ಕೋಟಿಯನ್ನು ಮಂಜೂರು ಮಾಡುವ ಯೋಜನೆಗೂ ಒಪ್ಪಿಗೆ ಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

116 ಬಿಜೆಪಿ ಮುಖಂಡರ ಬಂಧನ, ಬಿಡುಗಡೆ
ಬೆಂಗಳೂರು, ಮಾ. 15–
ಬಸ್‌ ಪ್ರಯಾಣದರ ಏರಿಕೆಯ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ಅಂಗವಾಗಿ ಇಂದು ಇಲ್ಲಿ ಸುಭಾಷ್‌ನಗರದ ಕೆಎಸ್‌ಆರ್‌ಟಿಸಿ ಮತ್ತು ಬಿಟಿಎಸ್‌ ನಿಲ್ದಾಣಗಳಲ್ಲಿ ಬಸ್‌ಗಳನ್ನು ತಡೆದ ಬಿಜೆಪಿ ಮುಖಂಡರಾದ ಬಿ.ಎಸ್‌.ಯಡಿಯೂರಪ್ಪ, ವೈ. ರಾಮಕೃಷ್ಣ ಸೇರಿದಂತೆ ಪಕ್ಷದ 116 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು.

ಪ್ರತಿಭಟನಕಾರರು ಸುಮಾರು ಅರ್ಧ ತಾಸು ರಸ್ತೆ ಮೇಲೆ ಅಡ್ಡಲಾಗಿ ಕುಳಿತಿದ್ದರಿಂದ ಈ ಎರಡು ನಿಲ್ದಾಣಗಳಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು. ಆದರೆ ಇಡೀ ಚಳವಳಿ ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತರೀತಿಯಲ್ಲಿ ಕೊನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.