ADVERTISEMENT

25 ವರ್ಷಗಳ ಹಿಂದೆ | ಶುಕ್ರವಾರ 28–7–1995

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 20:49 IST
Last Updated 27 ಜುಲೈ 2020, 20:49 IST

ಖಾಸಗಿ ಕಾಲೇಜುಗಳಿಗೆ ಶೇಕಡ 25 ಸೀಟು

ಬೆಂಗಳೂರು, ಜುಲೈ 27– ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್‌ ಮತ್ತು ನರ್ಸಿಂಗ್‌ ಶಿಕ್ಷಣದ ಪ್ರವೇಶದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶೇಕಡ 25ರಷ್ಟು ಸೀಟುಗಳನ್ನು ಬಿಟ್ಟುಕೊಡಲು ರಾಜ್ಯ ಸರ್ಕಾರ ಬಯಸಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸೀಟು ಸಿಕ್ಕಿದವರು ಪ್ರವೇಶ ಪಡೆದುಕೊಳ್ಳದೆ ಉಳಿದು ಹೋಗುವ ಹೆಚ್ಚಿನ ಸೀಟುಗಳನ್ನೂ ಖಾಸಗಿ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ನೀಡುವ ಶಿಫಾರಸೂ ರಾಜ್ಯ ಸರ್ಕಾರ ರೂಪಿಸಿರುವ ಪರಿಷ್ಕೃತ ನೀತಿಯಲ್ಲಿ ಅಡಕವಾಗಿದೆ ಎನ್ನಲಾಗಿದೆ.

ADVERTISEMENT

ಆದರೆ, ಈ ಹೆಚ್ಚಿನ ಸೀಟುಗಳನ್ನು ನ್ಯಾಯಾಲಯ ನಿಗದಿಗೊಳಿಸುವ ಶುಲ್ಕದ ಆಧಾರದಲ್ಲಿ, ಕರ್ನಾಟಕದ ವಿದ್ಯಾರ್ಥಿಗಳಿಗೇ ನೀಡಬೇಕೆಂದೂ ಆಡಳಿತ ಮಂಡಳಿಗಳಿಗೆ ಷರತ್ತು ವಿಧಿಸಲಾಗಿದೆ ಎಂದೂ ತಿಳಿದುಬಂದಿದೆ.

ಸಂಗೀತ ಶಿಕ್ಷಕ ಹುದ್ದೆ– ಅಂಧ ಅಭ್ಯರ್ಥಿ ನೇಮಕ

ಬೆಂಗಳೂರು, ಜುಲೈ 27– ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿಯಿರುವ ಸಂಗೀತ ಮತ್ತು ಕ್ರಾಫ್ಟ್‌ ಶಿಕ್ಷಕರ ಹುದ್ದೆಗಳಿಗೆ ತರಬೇತಿ ಹೊಂದಿದ ಅಂಧ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ, 2.84 ಲಕ್ಷ ವಿದ್ಯಾವಂತ ಅಂಗವಿಕಲರಿದ್ದಾರೆ. ಇವರಲ್ಲಿ ಅಂಧರು ಎಷ್ಟಿದ್ದಾರೆ ಎಂಬುದನ್ನು ಗುರುತಿಸಿ ನೇಮಕ ಮಾಡಿಕೊಳ್ಳಲು ಇಂದು ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಆ ನಂತರ ವಾರ್ತಾ ಸಚಿವ ಎಂ.ಸಿ. ನಾಣಯ್ಯ ಅವರು ಸುದ್ದಿಗಾರರಿಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.