ADVERTISEMENT

25 ವರ್ಷಗಳ ಹಿಂದೆ: ಭಾನುವಾರ, 26-5-1996

​ಪ್ರಜಾವಾಣಿ ವಾರ್ತೆ
Published 25 ಮೇ 2021, 18:29 IST
Last Updated 25 ಮೇ 2021, 18:29 IST
   

ಸಂಯುಕ್ತ ರಂಗಕ್ಕೆ ಕಾಂಗ್ರೆಸ್‌ ಷರತ್ತು?

ನವದೆಹಲಿ, ಮೇ 25– ಸಂಯುಕ್ತ ರಂಗಕ್ಕೆ ಬೆಂಬಲ ಘೋಷಿಸಿರುವ ಕಾಂಗ್ರೆಸ್‌ ಪಕ್ಷದಲ್ಲಿ ಕೆಲವು ನಾಯಕರಿಂದ ಕೇಳಿಬರುತ್ತಿರುವ ಅಪಸ್ವರಗಳು ಮತ್ತು ರಾಜ್ಯ ಘಟಕಗಳಿಂದ ಬರುತ್ತಿರುವ ವಿರೋಧದ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ನರಸಿಂಹ ರಾವ್‌ ಅವರು ಅನೌಪಚಾರಿಕವಾಗಿ ಕೆಲವು ಷರತ್ತುಗಳನ್ನು ಹಾಕುವುದನ್ನು ತಳ್ಳಿಹಾಕಲಾಗದು ಎಂಬುದಾಗಿ ಹೇಳಲಾಗುತ್ತಿದೆ.

ಹಾಗಾಗಿ, ಬಿಜೆಪಿ ನೇತೃತ್ವದ ಸರ್ಕಾರ ಉರುಳಿ ಬಿದ್ದು ಸಂಯುಕ್ತ ರಂಗ ಅಧಿಕಾರಕ್ಕೆ ಬಂದರೂ ಕಾಂಗ್ರೆಸ್‌ ಷರತ್ತಿನ ಇತಿಮಿತಿಯಲ್ಲಿ ಕಾರ್ಯನಿರ್ವಹಿಸುವುದು ಅನಿವಾರ್ಯವಾಗಬಹುದು. ಈ ದಿಸೆಯಲ್ಲಿ ದೆಹಲಿಯಲ್ಲಿ ಕಾಂಗ್ರೆಸ್‌ ವಲಯದಲ್ಲಿ ನಿತ್ಯವೂ ಎಡೆಬಿಡದೆ ರಾಜಕೀಯ ಚಟುವಟಿಕೆ, ಭೋಜನ ಕೂಟದ ಸಭೆಗಳು ನಡೆಯುತ್ತಿವೆ.

ADVERTISEMENT

ಅಯ್ಯೋ... ತಾಳಲಾರೆ ಈ ಉರಿ ಬಿಸಿಲು

ಬೆಂಗಳೂರು, ಮೇ 25– ಕಿತ್ತುಬರುವ ಬೆವರು, ಹೊರಗೆ ಕಾಲಿಟ್ಟರೆ ತಲೆ ಸಿಡಿದು ಹೋದೀತೇನೋ ಎನ್ನುವ ಅನುಭವವನ್ನು ತಂದು ಕೊಡುವಂತಹ ಬಿಸಿಲಿನ ಬೇಗೆ ಈ ವರ್ಷ ಇಡೀ ಕರ್ನಾಟಕವನ್ನು ಕಾಡುತ್ತಿದೆ.

ಮೊದಲೇ ಬೆಂಕಿಯ ನಗರಗಳೆಂದು ಖ್ಯಾತಿ ಪಡೆದು, ಸದಾ ಬರಗಾಲದ ದವಡೆಯಲ್ಲಿ ಸಿಕ್ಕು ನರಳುವ ವಿಜಾಪುರ ಹಾಗೂ ಕಲ್ಬುರ್ಗಿ ನಗರಗಳ ಜನರಿಗಂತೂ ಈ ಬಾರಿ ಕಾದ ಬಾಣಲೆಯ ಮೇಲೆ ಕೂತ ಅನುಭವ.

ರಾಯಚೂರು ಜಿಲ್ಲೆ ಕಳೆದ 23 ವರ್ಷಗಳಲ್ಲಿ ಕಾಣದಷ್ಟು ಬಿಸಿಲಿನ ತಾಪವನ್ನು ಕಂಡಿದೆ. ಕಳೆದ ಏಪ್ರಿಲ್‌ 30ರಂದು ಕಲ್ಬುರ್ಗಿಯಲ್ಲಿ ದಾಖಲಾಗಿರುವ ಉಷ್ಣಾಂಶ 44.5 ಡಿಗ್ರಿ ಸೆಲ್ಷಿಯಸ್‌ನಷ್ಟಾಗಿದ್ದು, ಜನರು ಬಿಸಿಲಿನ ಬೇಗೆ ತಾಳಲಾಗದೆ ಬಳಲಿ ಬೆಂಡಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.