ADVERTISEMENT

25 ವರ್ಷಗಳ ಹಿಂದೆ: ಶುಕ್ರವಾರ ಜೂನ್‌ 7, 1996

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 19:30 IST
Last Updated 6 ಜೂನ್ 2021, 19:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಸಿಂಧ್ಯಾಗೆ ಸಾರಿಗೆ, ಬಸವಣ್ಣೆಪ್ಪ ಆಹಾರ, ಲೀಲಾದೇವಿ ಪ್ರವಾಸ, ರೇವಣ್ಣ ವಸತಿ

ಬೆಂಗಳೂರು, ಜೂನ್‌ 6– ಕುತೂಹಲ ಕೆರಳಿಸಿದ್ದ ಸಚಿವ ಖಾತೆ ಹಂಚಿಕೆಯಲ್ಲಿ ಪಿ.ಜಿ.ಆರ್‌. ಸಿಂಧ್ಯಾ ಅವರಿಂದ ಗೃಹ ಖಾತೆ ಕಸಿದುಕೊಂಡು ಅವರಿಗೆ ಪ್ರಿಯವಾದ ಸಾರಿಗೆ ಇಲಾಖೆ ನೀಡಿರುವ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಅವರು ವಿದ್ಯುತ್‌ ಖಾತೆಯನ್ನು ತಮ್ಮಲ್ಲೇ ಉಳಿಸಿಕೊಂಡು ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಣಕಾಸು ಇಲಾಖೆಯನ್ನೇ ಕೊಟ್ಟಿದ್ದಾರೆ.

ಎಂ.ಪಿ. ಪ್ರಕಾಶ್‌ಗೆ ಗ್ರಾಮೀಣಾಭಿವೃದ್ಧಿ– ಪಂಚಾಯತ್ ರಾಜ್‌, ಮಧ್ಯಮ ಹಾಗೂ ಭಾರಿ ಕೈಗಾರಿಕೆಯನ್ನು ಆರ್‌.ವಿ.ದೇಶಪಾಂಡೆ, ಕೃಷಿಯನ್ನು ಸಿ.ಬೈರೇಗೌಡ ಅವರಿಗೆ ನೀಡುವ ಮೂಲಕ ನೂತನ ಸಚಿವ ಸಂಪುಟ ಮಹತ್ತರ ಬದಲಾವಣೆಗಳನ್ನು ತೋರದಿದ್ದರೂ ಲೇಪನವನ್ನು ಪಡೆದಿದೆ.

ADVERTISEMENT

ರಾಜ್ಯದಲ್ಲಿ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಬಗ್ಗೆ ಸರ್ಕಾರ ಬದ್ಧವಾಗಿದೆ ಎಂಬುದನ್ನು ತೋರಲು ಇದಕ್ಕಾಗಿಯೇ ಪ್ರತ್ಯೇಕ ಖಾತೆ ಸೃಷ್ಟಿಸಿರುವುದು ವಿಶೇಷವಾಗಿದೆ.

ಸಂಪುಟ ವಿಸ್ತರಣೆ ಅತೃಪ್ತಿ; 16 ಶಾಸಕರ ರಾಜೀನಾಮೆ

ಬೆಂಗಳೂರು, ಜೂನ್‌ 6– ಜೆ.ಎಚ್‌.ಪಟೇಲ್‌ ನೇತೃತ್ವದ ಸಚಿವ ಸಂಪುಟ ಪ್ರಾತಿನಿಧಿಕವಲ್ಲ ಮತ್ತು ಅಸಮತೋಲನದಿಂದ ಕೂಡಿದೆ ಎಂದು ಆರೋಪಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವವರ ಸಂಖ್ಯೆ 16ಕ್ಕೆ ಏರಿದೆ. ಆದರೆ ಈ ರಾಜೀನಾಮೆ ಪತ್ರಗಳು ನಿಯಮ ಪ್ರಕಾರ ಇಲ್ಲದಿರುವುದರಿಂದ ಅವುಗಳ ಅಂಗೀಕಾರ ಸಾಧ್ಯವಿಲ್ಲ ಎಂದು ವಿಧಾನಸಭೆ ಅಧ್ಯಕ್ಷ ರಮೇಶ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಈ ಪೈಕಿ ಐವರು ಶಾಸಕರು ತಾವು ರಾಜೀನಾಮೆ ನೀಡುತ್ತಿರುವುದಾಗಿ ಟೆಲಿಫೋನ್‌ ಮೂಲಕ ಹೇಳಿದ್ದಾರೆ. ಉಳಿದವರು ಬರೆದು ಕಳಿಸಿದ್ದರಾದರೂ ಅದು ಇರಬೇಕಾದ ರೀತಿಯಲ್ಲಿ ಇಲ್ಲ ಎಂದು ತಮ್ಮನ್ನು ಭೇಟಿಯಾದ ವರದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.