ADVERTISEMENT

25 ವರ್ಷಗಳ ಹಿಂದೆ: ಫ್ರೆಂಚ್‌ ಗಯಾನಾದಿಂದ ಇನ್ಸಾಟ್‌– 2ಇ ಉಪಗ್ರಹ ಯಶಸ್ವಿ ಉಡಾವಣೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 0:03 IST
Last Updated 4 ಏಪ್ರಿಲ್ 2024, 0:03 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಫ್ರೆಂಚ್‌ ಗಯಾನಾದಿಂದ ಇನ್ಸಾಟ್‌– 2ಇ ಉಪಗ್ರಹ ಯಶಸ್ವಿ ಉಡಾವಣೆ

ಕೌರು, ಫ್ರೆಂಚ್‌ ಗಯಾನಾ (ದಕ್ಷಿಣ ಅಮೆರಿಕ), ಏ. 3 (ಪಿಟಿಐ)– ಭಾರತ ಬಾಹ್ಯಾಕಾಶ ಸಂಸ್ಥೆಯ ಅತ್ಯಂತ ಮಹತ್ವಾಕಾಂಕ್ಷೆಯ, ಇನ್ಸಾಟ್‌ ಸರಣಿಯ ಕೊನೆಯ ಉಪಗ್ರಹವಾದ ಬಹೂಪಯೋಗಿ ಇನ್ಸಾಟ್‌ –2ಇ ಇಂದು ಬೆಳಗಿನ ಜಾವ ಅಂತರರಾಷ್ಟ್ರೀಯ ಸಮಯ 03.33ಕ್ಕೆ ಕೌರು ಬಾಹ್ಯಾಕಾಶ ಕೇಂದ್ರದಲ್ಲಿ ಏರಿಯಾನ್‌– 42ಪಿ ಉಡಾವಣಾ ವಾಹನದಿಂದ ಯಶಸ್ವಿಯಾಗಿ ಮತ್ತು ಕರಾರುವಾಕ್ಕಾಗಿ ನಭಕ್ಕೆ ಹಾರಿತು.

ಉಡಾವಣಾ ವಾಹಕ ಭಾರಿ ಸದ್ದು ಮಾಡುತ್ತ, ಬೆಂಕಿಯನ್ನು ಚೆಲ್ಲುತ್ತ ಕಕ್ಷೆಯತ್ತ ನೆಗೆಯುವಾಗ ಸುತ್ತಮುತ್ತಲಿನ ಪ್ರದೇಶವು ಬಂಗಾರದ ಬೆಳಕಿನಿಂದ ಹೊಳೆಯಿತು.

ಉಪಗ್ರಹವು ವ್ಯೋಮಕ್ಕೆ ಹಾರಿದ ಎಂಟು ನಿಮಿಷಗಳಲ್ಲಿ, ಹಾಸನದಲ್ಲಿರುವ ಉಪಗ್ರಹ ನಿಯಂತ್ರಣ ಕೇಂದ್ರದಲ್ಲಿ ಅದನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಾಯಿತು. ಮೊದಲ ಸಂಕೇತಗಳು ದೊರಕಿದ ತಕ್ಷಣವೇ ಉಪಗ್ರಹ ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಲಾಯಿತು.

ADVERTISEMENT

ಕಾಂಗ್ರೆಸ್‌ ಧರಣಿ, ಬಿಜೆಪಿ ಸಭಾತ್ಯಾಗ

ಬೆಂಗಳೂರು, ಏ. 3– ಬೆಂಗಳೂರಿಗೆ ನೀರು ಸರಬರಾಜು ಮಾಡುವ ಯೋಜನೆಯನ್ನು ವಿದೇಶಿ ಮೂಲದ ಬೈವಾಟರ್ ಸಂಸ್ಥೆಗೆ ವಹಿಸಿಕೊಡುವ ಹಿನ್ನೆಲೆಯಲ್ಲಿ ಭಾರಿ ಅವ್ಯವಹಾರ ನಡೆದಿರಬಹುದಾದ ಶಂಕೆ ಇರುವುದರಿಂದ ಜಂಟಿ ಸದನ ಸಮಿತಿ ರಚಿಸಬೇಕೆಂಬ ವಿರೋಧಿ ಬೇಡಿಕೆಯನ್ನು ನಿರಾಕರಿಸಿದ್ದನ್ನು ಪ್ರತಿಭಟಿಸಿ ವಿಧಾನಸಭೆಯಲ್ಲಿ ಇಂದು ಕಾಂಗ್ರೆಸ್‌ ಧರಣಿ ನಡೆಸಿದರೆ, ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

ಆದರೆ, ಕಾವೇರಿ ನಾಲ್ಕನೇ ಹಂತದ ಎರಡನೇ ಘಟ್ಟದ ನೀರು ಪೂರೈಕೆ ಗುತ್ತಿಗೆಯನ್ನು ನೀಡುವ ಬಗ್ಗೆ ಸರ್ಕಾರ ಯಾವುದೇ ಸಂಸ್ಥೆಯ ಜೊತೆಯಲ್ಲಿ ಒಪ್ಪಂದ ಮಾಡಿಕೊಂಡಿಲ್ಲ ಎಂದು ಮುಖ್ಯಮಂತ್ರಿ ಜೆ.ಎಚ್‌. ಪಟೇಲರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.