ADVERTISEMENT

25 ವರ್ಷಗಳ ಹಿಂದೆ | ಗ್ರಾಮಪಂಚಾಯಿತಿ ಕಾಯ್ದೆ ತಿದ್ದುಪಡಿ: ಸುಗ್ರೀವಾಜ್ಞೆ ಜಾರಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2024, 23:30 IST
Last Updated 28 ಜನವರಿ 2024, 23:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಗ್ರಾಮ ಪಂಚಾಯಿತಿ ಕಾಯ್ದೆ ತಿದ್ದುಪಡಿ: ಸುಗ್ರೀವಾಜ್ಞೆ ಜಾರಿ

ಬೆಂಗಳೂರು, ಜ. 28– ಗ್ರಾಮ ಪಂಚಾಯಿತಿಗಳನ್ನು ಪುನರ್‌ರಚಿಸುವ ಸಂಬಂಧ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ– 1993ಕ್ಕೆ ಕೆಲವು ತಿದ್ದುಪಡಿಗಳನ್ನು ಸೂಚಿಸಿ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರು ಇಂದು ಸುಗ್ರೀವಾಜ್ಞೆ ಹೊರಡಿಸಿದ್ದಾರೆ. 

ಈ ಸಂಬಂಧ ರಾಜ್ಯ ಸಚಿವ ಸಂಪುಟ ಸಭೆ ಮಾಡಿದ ಶಿಫಾರಸಿಗೆ ಅನುಗುಣವಾಗಿ ರಾಜ್ಯಪಾಲರು ಕರ್ನಾಟಕ ಪಂಚಾಯತ್ ರಾಜ್ (ತಿದ್ದುಪಡಿ) ಸುಗ್ರೀವಾಜ್ಞೆ–1999ಕ್ಕೆ ಇಂದು ತಮ್ಮ ಅಂಕಿತ ಹಾಕಿದ್ದಾರೆ. 

ADVERTISEMENT

ಪಂಚಾಯತ್‌ ರಾಜ್‌ ಕಾಯ್ದೆಗೆ ತಿದ್ದುಪಡಿ ಸೂಚಿಸಿ ರಾಜ್ಯಪಾಲರು ಸುಗ್ರೀವಾಜ್ಞೆ ಹೊರಡಿಸಿರುವ ಹಿನ್ನೆಲೆಯಲ್ಲಿ, ಪ್ರತಿ ಗ್ರಾಮ ಪಂಚಾಯಿತಿ ಕ್ಷೇತ್ರದ ವಿಸ್ತೀರ್ಣ ಮತ್ತು ಜನಸಂಖ್ಯಾ ಪ್ರಮಾಣ ಹೆಚ್ಚಾಗಲಿದೆ. ಅಲ್ಲದೆ, ಕ್ಷೇತ್ರಗಳ ಪುನರ್‌ವಿಂಗಡಣೆ, ಹೊಸ ಮತದಾರರ ಪಟ್ಟಿ ಹಾಗೂ ಕ್ಷೇತ್ರಗಳ ಮೀಸಲಾತಿಯು ಹೊಸದಾಗಿ ನಿಗದಿಯಾಗಬೇಕಿದೆ.

ಸೋನಿಯಾ ಗಾಂಧಿ ‘ಹಿಂದೂ’ ವಿವಾದ

ತಿರುಪತಿ, ಜ. 28 (ಪಿಟಿಐ)– ತಿರುಪತಿ ತಿರುಮಲ ದೇವಾಲಯದ ನಿಯಮದಂತೆ, ಹಿಂದೂಗಳಲ್ಲದವರ ಪ್ರವೇಶಕ್ಕಾಗಿ ಸಲ್ಲಿಸಬೇಕಾದ ಪ್ರಮಾಣಪತ್ರಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸಹಿ ಪಡೆಯುವ ಯತ್ನ ಇಂದು ಸಣ್ಣ ಗದ್ದಲಕ್ಕೆ ಕಾರಣವಾಯಿತು. 

ಸೋನಿಯಾ ಗಾಂಧಿ ಅವರು ನೆಹರೂ ಕುಟುಂಬಕ್ಕೆ ಸೇರಿದ ಕಾರಣ ಅವರು, ಹಿಂದೂ ಅಲ್ಲದವರು ಸಲ್ಲಿಸಬೇಕಾದ ಪ್ರಮಾಣಪತ್ರಕ್ಕೆ ಸಹಿ ಹಾಕಬೇಕಾದ ಅಗತ್ಯವಿಲ್ಲ ಎಂದು ಕಾಂಗ್ರೆಸ್ ನಾಯಕರು ವಾದಿಸಿದ ನಂತರ ಸೋನಿಯಾ ಅವರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಲಾಯಿತು. ಸಾಮಾನ್ಯರಂತೆ ಸಾಲಿನಲ್ಲಿ ನಿಂತು ಸೋನಿಯಾ ಅವರು ವೆಂಕಟೇಶ್ವರನ ದರ್ಶನ ಪಡೆದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.