ಬೆಂಗಳೂರು, ಜೂನ್ 3– ಚಲನಚಿತ್ರ ನಟ ಹಾಗೂ ಚಿತ್ರ ಕಾರ್ಮಿಕ ಸಂಘಟನೆಯ ಮುಖಂಡ ಅಶೋಕ್ ಅವರ ಪತ್ನಿ ಎ.ಸಿ. ಕಲ್ಪನಾ ಅವರನ್ನು ವಂಚನೆ ಆರೋಪದ ಮೇಲೆ ಆರ್.ಟಿ. ನಗರ ಪೊಲೀಸರು ಇಂದು ಬಂಧಿಸಿ ಜೈಲಿಗೆ ಕಳುಹಿಸಿದರು.
1995ರಲ್ಲಿ ಆರ್.ಟಿ. ನಗರದ ಜಯ ಎಂಬುವರಿಂದ 19.30 ಲಕ್ಷ ರೂಪಾಯಿ ಸಾಲ ಪಡೆದು, ವಂಚಿಸಿದ್ದ ಆರೋಪದ ಮೇಲೆ ಮ್ಯಾಜಿಸ್ಟ್ರೇಟ್ ಕೋರ್ಟ್ ಕಲ್ಪನಾ ಅವರನ್ನು ಬಂಧಿಸುವಂತೆ ಆದೇಶ ನೀಡಿತ್ತು. ಕಳೆದ ಫೆಬ್ರುವರಿ 11ರಂದು ಹೈಕೋರ್ಟ್ ಆದೇಶ ನೀಡಿ, 3 ತಿಂಗಳೊಳಗೆ ಹಣ ವಾಪಸ್ ಮಾಡುವಂತೆ ಕಲ್ಪನಾ ಅವರಿಗೆ ಸೂಚಿಸಿತ್ತು. 3 ತಿಂಗಳಾದರೂ ಹಣ ಕೊಡದಿದ್ದಾಗ ಅಂತಿಮವಾಗಿ ಇಂದು ಬೆಳಿಗ್ಗೆ ಆರ್.ಟಿ. ನಗರ ಪೊಲೀಸರು ಬನಶಂಕರಿಯಲ್ಲಿರುವ ಕಲ್ಪನಾ ಮನೆಗೆ ತೆರಳಿ ಅವರನ್ನು ಬಂಧಿಸಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದರು.
ಟಿಟಾನಸ್ ರೋಗಕ್ಕೆ ನಗರದಲ್ಲಿ ಪರಿಹಾರ
ಬೆಂಗಳೂರು, ಜೂನ್ 3– ನಗರದ ಹಿಂದೂಸ್ತಾನ್ ವಿಮಾನ ನಿಲ್ದಾಣದ ಬಳಿ ಇರುವ ವೈಮಾನಿಕ ವೈದ್ಯಕೀಯ ಇನ್‌ಸ್ಟಿಟ್ಯೂಟ್‌ನಲ್ಲಿ ಇರುವ ಗ್ಯಾಂಗ್ರೀನ್, ಟಿಟಾನಸ್ ಚಿಕಿತ್ಸಾ ಸೌಲಭ್ಯವನ್ನು ಸಾರ್ವಜನಿಕರೂ ಪಡೆಯಬಹುದು. ಅಪಘಾತಗಳಲ್ಲಿ ಏಟು ಬಿದ್ದು ರಕ್ತ ವಿಷಪೂರಿತವಾದಾಗ ಗ್ಯಾಂಗ್ರೀನ್ ಮತ್ತು ಟಿಟಾನಸ್ ರೋಗ ಉಂಟಾಗುತ್ತದೆ. ಇದರ ಸೌಲಭ್ಯ ಪಡೆಯಬಯಸುವವರು ನಗರದಲ್ಲಿನ ವಾಯು ಪಡೆ ಆಸ್ಪತ್ರೆಯಲ್ಲಿ ವಿಚಾರಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.