ಬೆಂಗಳೂರು, ಜೂನ್ 5– ‘ಶೀಘ್ರವೇ ರಾಜ್ಯದಲ್ಲಿ ಕುಡಿಯುವ ನೀರಿನ ಪೂರೈಕೆ ಹಾಗೂ ನಿರ್ವಹಣೆಯನ್ನು ಖಾಸಗೀಕರಿಸಲಾಗುವುದು’ ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಇಂದು ಇಲ್ಲಿ ಪ್ರಕಟಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿಶ್ವ ಹೂಡಿಕೆದಾರರ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಮಂತ್ರಿ, ‘ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆಯನ್ನು ಖಾಸಗೀಕರಿಸುವ ಪ್ರಕ್ರಿಯೆ ರಾಜ್ಯದಲ್ಲಿ ಭರದಿಂದ ನಡೆದಿದೆ. ಎರಡನೆಯ ಹಂತವಾಗಿ ನೀರಿನ ಪೂರೈಕೆ ಹಾಗೂ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಿಕೊಡಲಾಗುವುದು. ಈ ಕೆಲಸವನ್ನು ಬೆಂಗಳೂರಿನಿಂದ ಆರಂಭಿಸಿ ಮೈಸೂರು, ಹುಬ್ಬಳ್ಳಿ ಮುಂತಾಗಿ ಜಿಲ್ಲಾ ಕೇಂದ್ರಗಳಿಗೆ ವಿಸ್ತರಿಸಲಾಗುವುದು’ ಎಂದು ಪ್ರಕಟಿಸಿದರು.
ಪಂಚಾಯಿತಿ ಚುನಾವಣೆ ಇಂದು ಮುಕ್ತಾಯ
ಬೆಂಗಳೂರು, ಜೂನ್ 5– ರಾಜ್ಯದಲ್ಲಿ ನಾಳೆ ಉಳಿದ 11 ಜಿಲ್ಲಾ ಪಂಚಾಯಿತಿ ಮತ್ತು 76 ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದ್ದು, ರಾಜ್ಯ ಚುನಾವಣಾ ಆಯೋಗವು ಸುಸೂತ್ರ ಮತದಾನಕ್ಕೆ ಸಕಲ ವ್ಯವಸ್ಥೆ ಮಾಡಿದೆ.
ರಾಜ್ಯದ ಪೂರ್ವ ಮತ್ತು ಮಧ್ಯ ಭಾಗದಲ್ಲಿನ ಕಲ್ಬುರ್ಗಿ, ವಿಜಾಪುರ, ಬಾಗಲಕೋಟೆ, ಹಾವೇರಿ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಈ ಚುನಾವಣೆ ನಡೆಯಲಿದ್ದು ನಿನ್ನೆ ಸಂಜೆ ಚುನಾವಣಾ ಪ್ರಚಾರ ಅಂತ್ಯಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.