ADVERTISEMENT

25 ವರ್ಷಗಳ ಹಿಂದೆ: ಶುಕ್ರವಾರ, 7–11–1997

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2022, 19:30 IST
Last Updated 6 ನವೆಂಬರ್ 2022, 19:30 IST
   

ಟಾಡಾ ಆರೋಪ: ಮಾಜಿ ಸಚಿವ ಕಲ್ಪನಾಥ್ ಮುಕ್ತ
ನವದೆಹಲಿ, ನ. 6 (ಯುಎನ್ಐ, ಪಿಟಿಐ)–
ಭಯೋತ್ಪಾದನೆ ಹಾಗೂ ವಿಧ್ವಂಸಕ ಕೃತ್ಯಗಳ ನಿಯಂತ್ರಣ ಕಾಯಿದೆ (ಟಾಡಾ) ಅನ್ವಯ ಬಂಧಿತರಾಗಿದ್ದ ಕೇಂದ್ರದ ಮಾಜಿ ಸಚಿವ ಕಲ್ಪನಾಥ್ ರಾಯ್ ಅವರನ್ನು ಸುಪ್ರೀಂ ಕೋರ್ಟ್ ಇಂದು ಆರೋಪ ಮುಕ್ತಗೊಳಿಸಿದೆ.

ಮುಂಬೈನ ಜೆ.ಜೆ. ಆಸ್ಪತ್ರೆಯಲ್ಲಿ 1992ರ ಸೆಪ್ಟೆಂಬರ್‌ನಲ್ಲಿ ಸಂಭವಿಸಿದ ಗುಂಡಿನ ಚಕಮಕಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿತ್ತು. ಇದೇ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇತರ ಐವರನ್ನೂ ನ್ಯಾಯಾಲಯ ಬಂಧಮುಕ್ತಗೊಳಿಸಿದೆ.

‘ಭಯೋತ್ಪಾದಕರಿಗೆ ಆರೋಪಿಗಳು ಆಶ್ರಯ ನೀಡಿದ್ದಾರೆಂಬ ಬಗ್ಗೆ ಸೂಕ್ತ ಸಾಕ್ಷ್ಯ ಒದಗಿಸಲು ಸರ್ಕಾರಿ ವಕೀಲರು ವಿಫಲರಾಗಿಲರುವುದರಿಂದ ಆರೋಪಿಗಳನ್ನು ಮುಕ್ತಗೊಳಿಸಲಾಗುತ್ತಿದೆ’ಎಂದು ನ್ಯಾಯಾಧೀಶರಾದ ಎಂ.ಕೆ. ಮುಖರ್ಜಿ ಹಾಗೂ ಕೆ.ಟಿ. ಥಾಮಸ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಹೇಳಿತು.

ADVERTISEMENT

ಪಕ್ಷಾಂತರ: ಬಿಜೆಪಿಗೆ ಕೇಸರಿ ಸವಾಲು
ಬೆಂಗಳೂರು, ನ. 6–
‘ನಾನು ಅಡ್ವಾಣಿ ಅವರಿಗೆ ಸವಾಲು ಹಾಕುತ್ತೇನೆ ಕಾಂಗ್ರೆಸ್ ಪಕ್ಷದ ಕೇವಲ ಒಬ್ಬ ಲೋಕಸಭಾ ಸದಸ್ಯ ರಿಂದ ರಾಜೀನಾಮೆ ಕೊಡಿಸಿ ಬಿಜೆಪಿಗೆ ಸೇರಿಸಿಕೊಳ್ಳಲಿ ನೋಡೋಣ’ಎಂದು ಎಐಸಿಸಿ ಅಧ್ಯಕ್ಷ ಸೀತಾರಾಂ ಕೇಸರಿ ಅವರು ಇಂದು ಇಲ್ಲಿ ಸವಾಲು ಹಾಕಿದರು.

ಎರಡು ದಿನಗಳ ಭೇಟಿಗೆ ನಗರಕ್ಕೆ ಬಂದಿದ್ದ ಕೇಸರಿ ಅವರನ್ನು ಅಲ್ಲಿ ನೆರೆದಿದ್ದ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಈ ಸವಾಲಿನ ಉತ್ತರ ಕೊಟ್ಟರು.

ಕಾಂಗ್ರೆಸ್ ಪಕ್ಷದಿಂದ ಒಂದು ಗುಂಪು ಏನಾದರೂ ಬಂದಲ್ಲಿ ತಮ್ಮ ಸರ್ಕಾರವನ್ನು ಕೇಂದ್ರದಲ್ಲಿ ರಚಿಸಲು ಬಯಸುವುದಾಗಿ ಹಾಗೂ ಕೆಲವು ಕಾಂಗ್ರೆಸಿಗರು ಇದಕ್ಕೆ ಸಿದ್ಧರಿದ್ದಾರೆ ಎಂದು ಎಲ್.ಕೆ. ಅಡ್ವಾಣಿ ಹೇಳಿಕೆಯ ಬಗ್ಗೆ ಪ್ರಶ್ನಿಸಿದಾಗ ‘ಒಬ್ಬ ಕಾಂಗ್ರೆಸ್ ಲೋಕಸಭಾ ಸದಸ್ಯರನ್ನು ಅವರು ಸೇರಿಸಿಕೊಳ್ಳಲಿ ನೋಡೋಣ’ ಎನ್ನುವ ಸವಾಲನ್ನು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.