ADVERTISEMENT

25 ವರ್ಷಗಳ ಹಿಂದೆ: ಶುಕ್ರವಾರ, 21 ಮಾರ್ಚ್ 1997

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 19:30 IST
Last Updated 20 ಮಾರ್ಚ್ 2022, 19:30 IST
   

ಉ.ಪ್ರ: ದಂಗುಬಡಿಸಿದ ಬೆಳವಣಿಗೆ
ನವದೆಹಲಿ, ಮಾರ್ಚ್ 20–
ಉತ್ತರಪ್ರದೇಶದಲ್ಲಿ ಬಿಜೆಪಿ ಮತ್ತು ಬಿಎಸ್‌ಪಿ ಎರಡನೇ ಬಾರಿಗೆ ಒಂದುಗೂಡಿ ಸರ್ಕಾರ ರಚಿಸುವ ಒಪ್ಪಂದಕ್ಕೆ ಬಂದ ಹಠಾತ್ ರಾಜಕೀಯ ಬೆಳವಣಿಗೆಯು ದೆಹಲಿಯ ರಾಜಕೀಯ ವಲಯವನ್ನು ದಂಗುಬಡಿಸಿದೆ.

ಸರ್ಕಾರ ರಚಿಸುವ ಸಾಧ್ಯತೆಗಳ ರಹಸ್ಯ ಮಾತುಕತೆಗಳು, ಪ್ರಧಾನಿ ಅವರಿಗಾರಲಿ, ಕೇಂದ್ರ ಗೂಢಚರ್ಯ ಸಂಸ್ಥೆಗಾಗಲಿ ಇಲ್ಲವೇ ಸುದ್ದಿಯ ವಾಸನೆ ಹಿಡಿಯುವ ಮಾಧ್ಯಮಗಳಿಗಾಗಲಿ ಬುಧವಾರ ಮಧ್ಯಾಹ್ನ ಬಿಜೆಪಿ ವಕ್ತಾರರು ಪ್ರಕಟಿಸುವವರೆವಿಗೂ ತಿಳಿಯದೆ ಅಚ್ಚರಿ ಹುಟ್ಟಿಸಿತು.‌ ದೆಹಲಿಯ ಕೇರಳ ಮೂಲದ ಹಿರಿಯ ಪತ್ರಕರ್ತರೊಬ್ಬರ ಮಗಳ ವಿವಾಹ ಕಳೆದ ತಿಂಗಳ 28ರಂದು ಚೆನ್ನೈನಲ್ಲಿ ನೆರವೇರಿತು. ಈ ವಿವಾಹಕ್ಕೆ ಬಿಜೆಪಿಯ ಅಧ್ಯಕ್ಷ ಎಲ್‌.ಕೆ. ಅಡ್ವಾಣಿ ಮತ್ತು ಬಿಎಸ್‌ಪಿಯ ನಾಯಕ ಕಾನ್ಷಿರಾಂ ಹೋಗಿದ್ದಾಗ, ಅಲ್ಲಿ ಮತ್ತೆ ಉತ್ತರ ಪ್ರದೇಶದ ಸಮಸ್ಯೆಯನ್ನು ಈ ಇಬ್ಬರು ನಾಯಕರು ಪರಸ್ಪರ ಚರ್ಚಿಸಿದ್ದೇ ಮುಂದೆ ದೆಹಲಿಯಲ್ಲಿ ಮತ್ತಷ್ಟು ಮಾತುಕತೆಗೆ ಅವಕಾಶ ಒದಗಿಸಿತು ಎಂಬುದಾಗಿ ಬಿಜೆಪಿಯ ನಂಬಲರ್ಹವಾದ ಮೂಲಗಳು ಹೇಳುತ್ತಿವೆ.

ಮಾಯಾವತಿ ನೇತೃತ್ವದ ಐವರು ಸಚಿವರ ಸಂಪುಟ ನಾಳೆ ಪ್ರಮಾಣವಚನ ಸ್ವೀಕರಿಸಲಿದೆ.

ADVERTISEMENT

**
ಭಂಡಾರಿ ವಜಾ ನಿರ್ಣಯ ಕೈಬಿಟ್ಟ ಬಿಜೆಪಿ
ನವದೆಹಲಿ, ಮಾರ್ಚ್ 20 (ಯುಎನ್‌ಐ)–
ಲೋಕಸಭೆಯಲ್ಲಿ ಇಂದು ನಡೆದ ನಾಟಕೀಯ ಬೆಳವಣಿಗೆಯಲ್ಲಿ ತನ್ನ ಕಾರ್ಯತಂತ್ರವನ್ನು ಒಮ್ಮೆಲೆ ಬದಲಿಸಿದ ಬಿಜೆಪಿ ಉತ್ತರಪ್ರದೇಶದ ರಾಜ್ಯಪಾಲ ರೋಮೇಶ್ ಭಂಡಾರಿ ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ಒತ್ತಾಯಿಸುವ ನಿರ್ಣಯವನ್ನು ಕೈಬಿಟ್ಟಿತು.

ಈ ಕುರಿತು ಸಂಯುಕ್ತ ರಂಗ, ಕಾಂಗ್ರೆಸ್, ಸಿಪಿಎಂ ಹಾಗೂ ಐಯುಎಂಎಲ್ ಸದಸ್ಯರು ವ್ಯಕ್ತಪಡಿಸಿದ ಆಕ್ಷೇಪಗಳನ್ನು ಸ್ಪೀಕರ್ ಪಿ.ಎ.ಸಂಗ್ಮಾ ತಳ್ಳಿಹಾಕಿದರು.

‘ಬಿಜೆಪಿ– ಬಿಎಸ್‌ಪಿ ಸರ್ಕಾರಕ್ಕೆ ಪ್ರಮಾಣ ವಚನ ಬೋಧಿಸಲು ರಾಜ್ಯಪಾಲರು ಅಗತ್ಯವಾದ್ದರಿಂದ ಅವರನ್ನು ವಜಾಕ್ಕೆ ಒತ್ತಾಯಿಸುವ ನಿರ್ಣಯವನ್ನು ಬಿಜೆಪಿ ಕೈಬಿಟ್ಟಿದೆ’ ಎಂದು ಚಿದಂಬರಂ ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.