ADVERTISEMENT

25 ವರ್ಷಗಳ ಹಿಂದೆ: ಮಂಗಳವಾರ ಏಪ್ರಿಲ್‌ 9, 1996

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 19:30 IST
Last Updated 8 ಏಪ್ರಿಲ್ 2021, 19:30 IST
   

ಬಂಡೆದ್ದ ಮಾಜಿ ಸಚಿವರಿಗೆ ಕಾಂಗೈನಿಂದ ಅರ್ಧಚಂದ್ರ
ನವದೆಹಲಿ, ಏ. 8 (ಪಿಟಿಐ, ಯುಎನ್‌ಐ)–
ಪಕ್ಷದಲ್ಲಿ ಭುಗಿಲೆದ್ದಿರುವ ಬಂಡಾಯವನ್ನು ಹತ್ತಿಕ್ಕಲು ಕಾಂಗ್ರೆಸ್‌ (ಐ) ಪಕ್ಷ ಮಾಜಿ ಕೇಂದ್ರ ಸಚಿವರಾದ ಮಾಧವ ರಾವ್‌ ಸಿಂಧಿಯಾ, ಎಂ.ಅರುಣಾಚಲಂ ಮತ್ತು ಪಿ.ಚಿದಂಬರಂ ಸೇರಿದಂತೆ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಕಣಕ್ಕಿಳಿದಿರುವ 29 ಮಂದಿ ಬಂಡಾಯ ನಾಯಕರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಿದೆ. ತಮಿಳುನಾಡಿನಲ್ಲಿ ಹೊಸ ಪಕ್ಷ ರಚಿಸಿದ ಜಿ.ಕೆ.ಮೂಪನಾರ್‌ ಅವರನ್ನು ಅಮಾನತುಗೊಳಿಸಲಾಗಿದೆ.

ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಗ್ವಾಲಿಯರ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿರುವ ಮಾಜಿ ಕೇಂದ್ರ ಸಚಿವ ಮಾಧವ ರಾವ್ ಸಿಂಧಿಯಾ ಅವರನ್ನೂ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಪಕ್ಷದ ವಕ್ತಾರ ವಿ.ಎನ್‌.ಗಾಡ್ಗೀಳ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವೀರಪ್ಪನ್‌ಗೆ ರಾಜಕೀಯ ಸೇರುವ ಆಸೆ
ಮದ್ರಾಸ್‌, ಏ. 8 (ಪಿಟಿಐ)–
ದೇಶವನ್ನು ಕಾಡುತ್ತಿರುವ ಭ್ರಷ್ಟಾಚಾರ ವ್ಯವಸ್ಥೆಯನ್ನು ತೊಡೆಯಲು ತಾನು ರಾಜಕೀಯಕ್ಕೆ ಇಳಿಯ ಬಯಸಿರುವುದಾಗಿ ಕುಖ್ಯಾತ ಶ್ರೀಗಂಧ ಕಳ್ಳಸಾಗಣೆದಾರ, ದಂತಚೋರ ಹಾಗೂ ನರಹಂತಕ ವೀರಪ್ಪನ್‌ ಹೇಳಿಕೊಂಡಿದ್ದಾನೆ.

ADVERTISEMENT

‘ಸಮಾಜವಾದಿ ಪಕ್ಷದಿಂದ ಲೋಕಸಭಾ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಧುಮುಕಿರುವ ‘ಬ್ಯಾಂಡಿಟ್‌ ಕ್ವೀನ್‌’ ಫೂಲನ್‌ ದೇವಿಯಿಂದ ನಾನು ಸ್ಫೂರ್ತಿ ಪಡೆದುಕೊಂಡಿದ್ದೇನೆ. ಭ್ರಷ್ಟ ರಾಜಕಾರಣಿಗಳು, ಪೊಲೀಸರು ಹಾಗೂ ನ್ಯಾಯಾಂಗದ ಅಧಿಕಾರಿಗಳಿಂದ ತುಂಬಿರುವ ಈ ನಾಡನ್ನು ಸ್ವಚ್ಛಗೊಳಿಸಲು ನಾನು ರಾಜಕೀಯ ಪ್ರವೇಶಿಸುವ ಆಸೆ ಹೊಂದಿದ್ದೇನೆ’ ಎಂದು ತಮಿಳು ನಿಯತಕಾಲಿಕ ‘ನಕ್ಕೀರನ್‌’ಗೆ ನೀಡಿರುವ ವಿಡಿಯೊ ಸಂದರ್ಶನದಲ್ಲಿ ತಿಳಿಸಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.