‘ರಾಜ್ಯ ಸರ್ಕಾರ ಉರುಳಿಸಲು ದೆಹಲಿಯಲ್ಲಿ ಹಣ ಸಿದ್ಧ ಎಂಬಮಾತು ತೀರಾ ತಪ್ಪು’
ಬೆಂಗಳೂರು, ಜೂನ್ 10– ಮೈಸೂರು ಸರ್ಕಾರವನ್ನು ಉರುಳಿಸಲು ದೆಹಲಿಯಲ್ಲಿ ಹಣ ಸಿದ್ಧವಾಗಿದೆ ಎಂಬ ಹೇಳಿಕೆ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಶ್ರೀ ಕೆ.ಕೆ.ಷಾ ಅವರು ‘ಇಂದು ಈ ರೀತಿಯ ಹೇಳಿಕೆ ನೀಡುವುದು ತೀರಾ ತಪ್ಪು. ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಇದ್ದರೂ ವ್ಯಕ್ತಿಶಃ ಮಿತ್ರರಾಗಿರುವ ಮನೋಭಾವ ಬೇಕು’ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.
‘ಆಡಳಿತ ಕಾಂಗ್ರೆಸ್ಸಿಗೆ ಹೊಸ ಕಚೇರಿಗಳನ್ನು ಕೊಳ್ಳಲು ಹಣ ಇಲ್ಲ. ವಾಹನಗಳಿಗಂತೂ ಇಲ್ಲವೇ ಇಲ್ಲ. ಕಚೇರಿಗಳ ಕನಿಷ್ಠ ಅಗತ್ಯ ಪೂರೈಸಲೇ ಸಾಧ್ಯವಾಗದಿರುವಾಗ ಸರ್ಕಾರ ಉರುಳಿಸಲು ಹಣ ಸಿದ್ಧ ಎಂಬ ಮಾತು ಕೇಳಿ ನಗಬೇಕಾಗಿದೆ’ ಎಂದು ಅವರು ವರದಿಗಾರರೊಡನೆ ಮಾತನಾಡುತ್ತಾ ಹೇಳಿದರು.
ಅಧಿಕ ಉದ್ಯೋಗಾವಕಾಶ: ಪ್ರೋತ್ಸಾಹಕ ವಿಧಾನಕ್ಕೆರಾಷ್ಟ್ರಪತಿ ಒತ್ತಾಯ
ಜಿನೀವಾ, ಜೂನ್ 10– ಅಭಿವೃದ್ಧಿಯ ಎಲ್ಲ ಮಾರ್ಗಗಳ ಮೂಲಕವೂ ಇಡೀ ಹೆಚ್ಚುವರಿ ಜನಶಕ್ತಿಯನ್ನು ಬಳಸಿಕೊಳ್ಳಲು ಸಾಧ್ಯವಾಗುವಂತೆ ಹೆಚ್ಚು ಉದ್ಯೋಗಾವಕಾಶಗಳನ್ನು ಪ್ರೋತ್ಸಾಹಿಸಬಲ್ಲ ವಿಧಾನವೊಂದನ್ನು ರೂಪಿಸಬೇಕೆಂದು ರಾಷ್ಟ್ರಪತಿ ಶ್ರೀ ವಿ.ವಿ.ಗಿರಿ ಅವರು ಇಂದು ಕರೆ ಕೊಟ್ಟಿದ್ದಾರೆ.
121 ರಾಷ್ಟ್ರಗಳ ಅಂತರರಾಷ್ಟ್ರೀಯ ವಾರ್ಷಿಕ ಕಾರ್ಮಿಕ ಸಮ್ಮೇಳನವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ‘ಹೆಚ್ಚುವರಿ ಜನಶಕ್ತಿಯನ್ನು ಕ್ರಿಯಾಶೀಲಗೊಳಿಸಬಲ್ಲ ರಾಷ್ಟ್ರವ್ಯಾಪಿ ವಿವಿಧೋದ್ದೇಶ ಪೈಲಟ್ ಯೋಜನೆಗಳ ಜಾಲ ರಚಿಸಬೇಕೆಂದು ನಾನು ಒತ್ತಾಯ ಮಾಡುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.