ADVERTISEMENT

50 ವರ್ಷಗಳ ಹಿಂದೆ| ಶುಕ್ರ ವಾರ, 19–12–1969

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 19:32 IST
Last Updated 18 ಡಿಸೆಂಬರ್ 2019, 19:32 IST

ಆಳುವ ಕಾಂಗ್ರೆಸ್ ಅರ್ಥನೀತಿ ಸೂತ್ರ

ವರ್ಷದಲ್ಲಿ ಆಮದು ರಾಷ್ಟ್ರೀಕರಣ, ಭೂಮಿ ವ್ಯವಸ್ಥೆ ಮಧ್ಯವರ್ತಿಗಳ ರದ್ದು;

ಆಸ್ತಿ ತೆರಿಗೆ, ವೆಚ್ಚಕ್ಕೆ ಹಿಡಿತ, ಇತರ ಬ್ಯಾಂಕುಗಳೂ ಪ್ರಭುತ್ವಕ್ಕೆ

ADVERTISEMENT

ನವದೆಹಲಿ, ಡಿ. 18– 1970ರೊಳಗೆ ಎಲ್ಲ ಆಮದು ವ್ಯವಹಾರದ, 1974 ರೊಳಗೆ ಎಲ್ಲ ರಫ್ತು ವ್ಯವಹಾರದ ರಾಷ್ಟ್ರೀಕರಣ, ಒಂದು ವರ್ಷದ ಅವಧಿಯಲ್ಲಿ ಭೂಮಿ ವ್ಯವಸ್ಥೆಯಲ್ಲಿ ಎಲ್ಲ ಮಧ್ಯವರ್ತಿಗಳ ನಿರ್ಮೂಲನೆ, ಖಾಸಗಿ ಉದ್ಯಮರಂಗದ ಉಸ್ತುವಾರಿಗೆ ಸಂಸತ್ತಿನ ಸಮಿತಿಯೊಂದರ ರಚನೆ–ಆಳುವ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅರ್ಥನೀತಿಯ ಮಂಡಳಿ ಸೂಚಿಸಿರುವ ಸಲಹೆಗಳಲ್ಲಿ ಕೆಲವು.

ಉಳಿದಿರುವ ಎಲ್ಲ ವಾಣಿಜ್ಯ ಬ್ಯಾಂಕುಗಳ ರಾಷ್ಟ್ರೀಕರಣ ಮತ್ತು ವಿದೇಶೀ ಬ್ಯಾಂಕುಗಳನ್ನು ವಹಿಸಿಕೊಳ್ಳುವುದರ ಪರಿಶೀಲನೆಯನ್ನೂ ಈ ಮಂಡಳಿ ಸೂಚಿಸಿದೆ. ಔದ್ಯಮಿಕ ನೀತಿ ನಿರ್ಣಯದಲ್ಲಿರುವ ಸಂದಿಗ್ದತನಗಳನ್ನು ನಿವಾರಿಸಲು ಹಾಗೂ ಬಳಕೆ ವಸ್ತುಗಳನ್ನು ಉತ್ಪಾದಿಸುವ ಉದ್ಯಮಗಳಲ್ಲಿ ವಿದೇಶೀ ಬಂಡವಾಳವನ್ನು ನಿಷೇಧಿಸಲು ತಕ್ಕಂತೆ ಇದನ್ನು ತಿದ್ದುಪಡಿ ಮಾಡಬೇಕೆಂದೂ ಹೇಳಿದೆ.

ಮಲ್ಲಪ್ಪ, ಅರಸು, ಕೃಷ್ಣಪ್ಪ ಮತ್ತಿತರರು ಕಾಂಗ್ರೆಸ್ಸಿನಿಂದ ವಜಾ

ಬೆಂಗಳೂರು, ಡಿ. 18– ಸಿಂಡಿಕೇಟ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು, ಪ್ರಧಾನಿ ಕಾಂಗ್ರೆಸ್ಸಿನ ಏಳು ಮಂದಿ ಪ್ರಮುಖ ಸದಸ್ಯರನ್ನು ಕಾಂಗ್ರೆಸ್ಸಿನಿಂದ ವಜಾ ಮಾಡಿದ್ದಾರೆ.

ಸಂಸ್ಥೆಗೆ ಸಂಬಂಧಿಸಿದಂತೆ ಅಕ್ರಮ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆಂಬ ಕಾರಣದ ಮೇಲೆ ಅಧ್ಯಕ್ಷರು ಈ ಕ್ರಮ ಕೈಗೊಂಡಿದ್ದಾರೆ.ಕಾಂಗ್ರೆಸ್ ಸದಸ್ಯತ್ವದಿಂದ ತೆಗೆದು ಹಾಕಲ್ಪಟ್ಟಿರುವವರು.

ಸರ್ವಶ್ರೀ ಕೊಲ್ಲೂರು ನಾಗಪ್ಪ, ಬಿ. ಶಂಕರಾನಂದ್, ಎಂ.ವಿ. ಕೃಷ್ಣಪ್ಪ, ಕೆ.ಎನ್. ವೀರನಗೌಡ, ಡಿ. ದೇವರಾಜ ಅರಸು, ಆರ್. ದಯಾನಂದ ಸಾಗರ್ ಹಾಗೂ ಶ್ರೀಮತಿ ಕೆ.ಎಸ್. ನಾಗರತ್ನಮ್ಮ.

ಮಹಾರಾಷ್ಟ್ರ ಗಡಿ ದಾಹಕ್ಕೆ ಚವಾಣ್ ಕುಮ್ಮಕ್ಕು:ಮುಖ್ಯಮಂತ್ರಿ ಶಂಕೆ; ಪ್ರಧಾನಿಗೆ ಪತ್ರ

ಬೆಂಗಳೂರು, ಡಿ. 18– ಮೈಸೂರು ಮತ್ತು ಮಹಾರಾಷ್ಟ್ರ ಗಡಿ ಸಮಸ್ಯೆಯ ವಿಚಾರದಲ್ಲಿ ಕೇಂದ್ರ ಸರಕಾರದ ನಿಲುವೇನೆಂಬುದನ್ನು ತಿಳಿಸಬೇಕೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಪ್ರಧಾನ ಮಂತ್ರಿಯವರಿಗೆ ಸ್ಪಷ್ಟನೆ ಕೋರಿ ಪತ್ರ ಬರೆದಿದ್ದಾರೆ.

ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯು ಮುಂದಿನ ಆಯವ್ಯಯ ಅಧಿವೇಶನದೊಳಗಾಗಿ ವಿವಾದವನ್ನು ಬಗೆಹರಿಸಬೇಕೆಂದು ಕೋರಿರುವುದರಿಂದ ಮಹಾಜನ್ ಆಯೋಗದ ತೀರ್ಪಿನ ವಿಚಾರದಲ್ಲಿ ಕೇಂದ್ರದ ನಿಲುವನ್ನು ತಿಳಿಸಲು ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.