ಹಣಕಾಸು ಶಿಸ್ತಿನ ಜತೆಯಲ್ಲೇ ಉತ್ಪಾದನೆ, ಆಡಳಿತ ದಕ್ಷತೆಗೆ ರಿಸರ್ವ್ ಬ್ಯಾಂಕಿನ ಸಪ್ತ ಸಲಹೆ
ಮುಂಬೈ, ಸೆ. 13– ಹಣದುಬ್ಬರ ತಡೆಗೆ ಹಣ ಕಾಸು ವಿಚಕ್ಷಣೆಯ ಜತೆಗೆ ಇತರ ಕ್ರಮಗಳೂ ಅಗತ್ಯವೆಂದು ರಿಸರ್ವ್ ಬ್ಯಾಂಕ್ ಸೂಚಿಸಿದೆ.
ಆಹಾರಧಾನ್ಯಗಳ ವಿತರಣೆಗೆ ದಕ್ಷ ಸರ್ಕಾರಿ ವ್ಯವಸ್ಥೆ, ಕಪ್ಪುಹಣಕ್ಕೆ ತಡೆ, ಹಣ ಸರಬರಾಜು ಕಡಿಮೆ ಮಾಡುವಿಕೆ ಹಾಗೂ ಕೃಷಿ ಮತ್ತು ಕೈಗಾರಿಕಾ ಉತ್ಪಾದನೆ ಹೆಚ್ಚಿಸಲು ದೃಢ ನಿರ್ಧಾರಯುತ ಪ್ರಯತ್ನ... ಇವುಗಳು ಬ್ಯಾಂಕಿನ ಏಳು ಪ್ರಮುಖ ಸೂಚನೆಯಲ್ಲಿ ಸೇರಿವೆ.
***
ಇದು ಬದುಕಲ್ಲ, ಬರಿ ಬವಣೆ
ಬೆಂಗಳೂರು, ಸೆ. 13– ಐದು ತಿಂಗಳಲ್ಲಿ ನೂರಕ್ಕೆ ಸರಾಸರಿ ಮೂವತ್ತರಷ್ಟು ಬೆಲೆ ಏರಿಕೆ. ಜನಸಾಮಾನ್ಯರ ನಿತ್ಯಬಳಕೆಯ ವಸ್ತುಗಳಾದ ಎಣ್ಣೆ, ಬೇಳೆ, ಕಾಳು, ಮೈ ಸಾಬೂನು, ಬೆಲ್ಲ, ಸಕ್ಕರೆ ಮೊದಲಾದವುಗಳ ಬೆಲೆಯು ಹಬ್ಬಗಳ ಸರಣಿ ಪ್ರಾರಂಭವಾದಂತೆ ಜೀವನಕ್ಕೆ ದುರ್ಭರ ಪರಿಸ್ಥಿತಿ ಇರುವ ಜನಸಾಮಾನ್ಯರಿಗೆ ದಿಕ್ಕು ತೋಚದಂತೆ ಮಾಡಿರುವ ಸಮಸ್ಯೆ.
ನಿಗದಿಯಾದ ವರಮಾನ. ಆದರೆ ಪ್ರತಿದಿನ ಏರುಮುಖವಾಗಿರುವ ಮಾರುಕಟ್ಟೆ. ಮಿತವಾಗಿ ಬಳಸಿ–ಉಳಿಸಿ ಎಂಬ ಸರ್ಕಾರದ ಘೋಷಣೆಯನ್ನು ಕಾನೂನು ಮೂಲಕ ಜಾರಿಗೆ ತರಬೇಕಾಗಿಲ್ಲ... ಕಾರಣ, ಕೊಳ್ಳಲು ಕಾಸಿಲ್ಲದೆ, ಬದುಕಲು ಸಾಧ್ಯವಾದ ಕಡೆಗಳಲ್ಲೆಲ್ಲಾ ಸಾಲ ಮಾಡಿದರೂ ಬವಣೆ ತಪ್ಪದ ಪರಿಸ್ಥಿತಿ.
ಪೌಷ್ಟಿಕ ಆಹಾರದ ಮಾತಿರಲಿ, ಹೊಟ್ಟೆ ತುಂಬಲು ಏನಾದರೂ ಸಿಕ್ಕಿದರೆ ಸಾಕೆಂದು ಕಾತರ ಪಡುವ ಸನ್ನಿವೇಶ.
***
ಮೈಸೂರಿನಲ್ಲಿ ಲಲಿತಮಹಲ್ ಹೋಟೆಲ್ ಆರಂಭ
ಮೈಸೂರು, ಸೆ. 13– ಇದುವರೆಗೆ ರಾಜಮಹಾರಾಜರೂ ಗಣ್ಯ ವ್ಯಕ್ತಿಗಳೂ ಇಳಿದುಕೊಳ್ಳುತ್ತಿದ್ದ ಲಲಿತಮಹಲ್ ಇಂದಿನಿಂದ ಸಾರ್ವಜನಿಕರೂ ಇಳಿದುಕೊಳ್ಳಬಹುದಾದ ಹೋಟೆಲ್ ಆಗಿ ತೆರೆಯಲ್ಪಟ್ಟಿತು. ಕೇಂದ್ರ ಪ್ರವಾಸೋದ್ಯಮ ಖಾತೆ ಸಚಿವೆ ಡಾ. ಸರೋಜಿನಿ ಮಹಿಷಿ ಅವರು ಈ ಭವ್ಯ ಹೋಟೆಲನ್ನು ಉದ್ಘಾಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.