
ಅರಸು ಗುಂಪಿನ ವಿರುದ್ಧ ಮೊದಲ ಬಾರಿಗೆ ಭಿನ್ನಮತೀಯರ ಬಹಿರಂಗ ಸೆಣಸು
ಬೆಂಗಳೂರು, ಮೇ 16– ವಿಧಾನಮಂಡಲದ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತೀಯರು ಮೊದಲ ಬಾರಿಗೆ ‘ಬಹಿರಂಗವಾಗಿ ಹೊರಬಂದು’ ಅರಸು ಬೆಂಬಲಿಗರ ಗುಂಪಿನೊಡನೆ ‘ಹೋರಾಡಲಿದ್ದಾರೆ’.
ಈ ‘ಹೋರಾಟದ’ ಅಂಗವಾಗಿ ನಾಳೆ ನಡೆಯಲಿರುವ ಪಕ್ಷದ ಅಧಿಕಾರ ವರ್ಗ ಹಾಗೂ ಕಾರ್ಯಸಮಿತಿ ಚುನಾವಣೆಗಳಲ್ಲಿ ಭಿನ್ನಮತೀಯರು ಮುಖ್ಯಮಂತ್ರಿ ಗುಂಪಿನ ವಿರುದ್ಧ ಸ್ಪರ್ಧಿಸಲಿದ್ದಾರೆ.
ಪಕ್ಷದ ಉಪನಾಯಕ ಸ್ಥಾನಕ್ಕೆ ಮಂತ್ರಿಮಂಡಲದ ಗುಂಪಿನ ಪರವಾಗಿ ಹಿರಿಯ ಸದಸ್ಯ, ಸಚಿವ ಶ್ರೀ ಎಚ್. ಸಿದ್ದವೀರಪ್ಪ ಅವರ ವಿರುದ್ಧ ಭಿನ್ನಮತೀಯರ ಪರವಾಗಿ ಮಾಜಿ ಸಚಿವ ಶ್ರೀ ಬಿ. ಬಸವಲಿಂಗಪ್ಪ ಅವರು ಸ್ಪರ್ಧಿಸಿದ್ದಾರೆ. ಈ ಸ್ಪರ್ಧೆ ಪೈಪೋಟಿಯ ಸೂಚಕವಾಗಿದೆ.
ಫರಕ್ಕಾ ಕಾರ್ಯಾರಂಭಕ್ಕೆ ಮುನ್ನ ನದಿ ನೀರು ಹಂಚಿಕೆ ಒಪ್ಪಂದ
ನವದೆಹಲಿ, ಮೇ 16– ಭಾರತ ಮತ್ತು ಬಾಂಗ್ಲಾ ದೇಶಗಳ ನಡುವೆ ಗಡಿ ಗುರುತಿಸುವ ಬಗ್ಗೆ ಎರಡೂ ದೇಶಗಳು ಇಂದು ಒಪ್ಪಂದ ಮಾಡಿಕೊಂಡವು.
1974ರ ಕೊನೆಯ ವೇಳೆಗೆ ಫರಕ್ಕಾ ಯೋಜನೆ ಕಾರ್ಯಾರಂಭವಾಗುವುದಕ್ಕೆ ಮೊದಲೇ ಗಂಗಾ ನದಿ ನೀರಿನ ಹಂಚಿಕೆ ಬಗ್ಗೆ ಸೌಹಾರ್ದಯುತ ಒಪ್ಪಂದಕ್ಕೆ ಬರಬೇಕೆಂದೂ ಎರಡೂ ದೇಶಗಳು ನಿರ್ಧರಿಸಿವೆ.
ಬಾಂಗ್ಲಾ ಪ್ರಧಾನಿ ಮುಜೀಬ್ ಅವರ ಐದು ದಿನಗಳ ಭಾರತ ಪ್ರವಾಸದ ಕೊನೆಯಲ್ಲಿ ಇಂದು ಹೊರಡಿಸಲಾದ ಸಂಯುಕ್ತ ಘೋಷಣೆಯಲ್ಲಿ ಪ್ರಧಾನಿ ಇಂದಿರಾಗಾಂಧಿ ಮತ್ತು ಪ್ರಧಾನಿ ಮುಜೀಬ್ ಈ ಅಂಶಗಳನ್ನು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.