ADVERTISEMENT

50 ವರ್ಷಗಳ ಹಿಂದೆ: ರಾಜ್ಯದಲ್ಲಿ ಆಹಾರಧಾನ್ಯ ಅಭಾವ ನಿವಾರಣೆಗೆ ಸರ್ಕಾರದ ಕ್ರಮ

ಪ್ರಜಾವಾಣಿ ವಿಶೇಷ
Published 10 ಆಗಸ್ಟ್ 2023, 23:30 IST
Last Updated 10 ಆಗಸ್ಟ್ 2023, 23:30 IST
ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ
ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ   

ರಾಜ್ಯದಲ್ಲಿ ಆಹಾರಧಾನ್ಯ ಅಭಾವ ನಿವಾರಣೆಗೆ ಸರ್ಕಾರದ ವಿಶೇಷ ಕ್ರಮ

ಬೆಂಗಳೂರು, ಆ. 10– ಕೊಯ್ಲಿನ ಪೂರ್ವದ ತಿಂಗಳುಗಳಲ್ಲಿ ರಾಜ್ಯದ ಕೈಗಾರಿಕಾ ಕೇಂದ್ರ
ಗಳು, ಮುಖ್ಯ ಪಟ್ಟಣಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಕಾಣಬಹುದಾದ ಆಹಾರಧಾನ್ಯ ಅಭಾವ ನಿವಾರಣೆಗೆ ಸರ್ಕಾರ ಕೆಲವೊಂದು ವಿಶೇಷ ಕ್ರಮಗಳನ್ನು ಕೈಗೊಂಡಿದೆ.

ಇದರ ಪ್ರಕಾರ, ಹೆಚ್ಚುವರಿ ಆಹಾರಧಾನ್ಯ ಇರುವ ಕಡೆಗಳಿಂದ ಕೊರತೆ ಪ್ರದೇಶಗಳಿಗೆ ಸುಲಭದಲ್ಲಿ ಆಹಾರಧಾನ್ಯ ಸಾಗಿಸುವ ವ್ಯವಸ್ಥೆಗೆ ಅನುವು ಮಾಡಿಕೊಡಲಾಗಿದೆ.

ADVERTISEMENT

ಬೆಂಗಳೂರಿನ ಬಿಇಎಲ್‌, ಎಚ್‌ಎಂಟಿ ಮತ್ತು ಮೈಕೊ ಕಾರ್ಖಾನೆಗಳಿಗೆ ಹೆಚ್ಚುವರಿ ಪ್ರದೇಶದಿಂದ ಲೆವಿ ಇಲ್ಲದೆ ಆಹಾರಧಾನ್ಯ ಸಾಗಿಸಿ ಕಾರ್ಮಿಕರಿಗೆ ಹಂಚುವುದಕ್ಕೆ ಅವಕಾಶ ಮತ್ತು ಅನುಮತಿ ನೀಡಲಾಗಿದೆ.

ಸ್ಥಳೀಯ ಸಂಸ್ಥೆ ರದ್ದು ಮಾಡುವ ರಾಜ್ಯ ಸರ್ಕಾರಗಳ ಧೋರಣೆ ಕುರಿತು ತೀವ್ರ ಕಳವಳ

ಹುಬ್ಬಳ್ಳಿ, ಆ. 10– ಸ್ಥಳೀಯ ಸಂಸ್ಥೆಗಳನ್ನು ರದ್ದು ಮಾಡುವ ಕೆಲವು ರಾಜ್ಯ ಸರ್ಕಾರಗಳ ಇತ್ತೀಚಿನ ಧೋರಣೆಯ ಬಗ್ಗೆ ಇಂದು ಇಲ್ಲಿ ಸೇರಿದ್ದ ಅಖಿಲ ಭಾರತ ಮೇಯರುಗಳ ಕೌನ್ಸಿಲ್‌ನ ಕಾರ್ಯಕಾರಿ ಸಮಿತಿಯು ತನ್ನ ತೀವ್ರ ಕಳವಳ ಸೂಚಿಸಿ, ಇದು ಪ್ರಜಾಸತ್ತೆಗೆ ಅಪಾಯಕಾರಕ ಎಂದು ಅಭಿಪ್ರಾಯಪಟ್ಟಿತು.

ಪ್ರಮುಖ ಮುನಿಸಿಪಲ್‌ ಕಾರ್ಪೊರೇಷನ್‌ಗಳನ್ನು ರದ್ದು ಮಾಡುವಲ್ಲಿ ಆಯಾ ಸರ್ಕಾರಗಳು ಕೈಗೊಂಡ ತಮ್ಮ ನಿರ್ಧಾರ
ಗಳನ್ನು ಪುನರ್‌ಪರಿಶೀಲಿಸಬೇಕೆಂದು ಉತ್ತರ ಪ್ರದೇಶದ ರಾಜ್ಯಪಾಲರಿಗೂ ಮಧ್ಯಪ್ರದೇಶದ ಮುಖ್ಯಮಂತ್ರಿಗೂ ಮನವಿ ಮಾಡಿಕೊಳ್ಳಲು ಸಭೆ ನಿರ್ಧರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.