50 ವರ್ಷಗಳ ಹಿಂದೆ ಈ ದಿನ
ಮರಗಳ ನಾಶಕ್ಕೆ ಕೊಡಲಿ ಪೆಟ್ಟು
ಬೆಂಗಳೂರು, ಮೇ 8– ಸಾರ್ವಜನಿಕ ಪ್ರದೇಶಗಳಲ್ಲಿನ ಮರಗಳನ್ನು ಕಡಿಯುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಶಾಸನವನ್ನು ಜಾರಿಗೆ ತರಬೇಕೆಂದು ನಗರ ಸಭೆಯ ಆಡಳಿತಾಧಿಕಾರಿ ಲಕ್ಷ್ಮಣರಾವ್ ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಉದ್ಯಾನವನಗಳ ಸಂರಕ್ಷಣಾ ಶಾಸನವನ್ನು ಈ ಕ್ರಮ ಸೇರಿಸಿ ತಿದ್ದುಪಡಿ ಮಾಡುವ ಸಂಭವ ಇದೆ.
ಇದರೊಂದಿಗೆ ಮನೆ ಕಟ್ಟುವವರಿಗೆ ಮನೆಗಳ ವಿನ್ಯಾಸಗಳಿಗೆ ಸರಿಹೊಂದುವಂತೆ ಮರಗಳನ್ನು ನೆಡಬೇಕೆಂದು ನಗರಸಭೆ ಸಲಹೆ ಮಾಡಲಿದೆ. ಈಗಾಗಲೇ ಅನೇಕರು ತೆಂಗಿನ ಮರಗಳನ್ನು ಒಳಗೊಂಡಂತೆ ಮನೆಗಳನ್ನು ಕಟ್ಟಿದ್ದಾರೆ.
ಈ ವರ್ಷ ಮಳೆ ‘ಸರಿಯಾಗಿ’ ಪ್ರಾರಂಭವಾದ ಕೂಡಲೇ ನಗರಸಭೆ ನಗರದ ಎಲ್ಲೆಡೆಯಲ್ಲಿ ಮರಗಳನ್ನು ನೆಡುವ ಕಾರ್ಯಕ್ರಮ ಹಾಕಿಕೊಂಡಿದೆ.
99 ಆಪಾದನೆ ಪರಿಶೀಲನೆ ವರದಿ ಬಗ್ಗೆ ಅರಸು ಅಚ್ಚರಿ
ಬೆಂಗಳೂರು, ಮೇ 8– ಮುಖ್ಯಮಂತ್ರಿ ದೇವರಾಜ ಅರಸು ಅವರು ಕೇಂದ್ರದ ಗೃಹಸಚಿವ ಕೆ.ಬ್ರಹ್ಮಾನಂದರೆಡ್ಡಿ ಅವರಿಗೆ ಪತ್ರ ಬರೆದು ತಮ್ಮ ಮತ್ತು ತಮ್ಮ ಮಂತ್ರಿಮಂಡಲದ ವಿರುದ್ಧ 99 ಆಪಾದನೆಗಳನ್ನು ಪರಿಶೀಲಿಸಲಾಗುತ್ತಿದೆಯೆಂಬ ಪತ್ರಿಕಾ ವರದಿಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆಂದು ಗೊತ್ತಾಗಿದೆ.
99 ಆಪಾದನೆಗಳನ್ನು ಪರಿಶೀಲಿಸಲಾಗುತ್ತಿದೆಯೆಂದು ರೆಡ್ಡಿ ಅವರು ತಮ್ಮ ಇಲಾಖೆಗೆ ಸಂಬಂಧಿಸಿದ ಸಮಾಲೋಚನಾ ಸಮಿತಿಯಲ್ಲಿ ಹೇಳಿದರೆಂದು ವರದಿಯಾಗಿತ್ತು.
ಅರಸು ಅವರು ತಮ್ಮ ಪತ್ರದಲ್ಲಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವೀರೇಂದ್ರ ಪಾಟೀಲರು ಪ್ರಧಾನಿಗೆ ಬರೆದ ಪತ್ರದಲ್ಲಿ ಮೂರು ನಿರ್ದಿಷ್ಟ ಆಪಾದನೆಗಳನ್ನು ಮಾತ್ರ ಪ್ರಸ್ತಾಪಿಸಲಾಗಿದ್ದು ಆ ಸಂಬಂಧದಲ್ಲಿ ಕೇಳಲಾದ ಎಲ್ಲ ವಿವರಣೆಗಳನ್ನೂ ಕೇಂದ್ರದ ಗೃಹಶಾಖೆಗೆ ಕಳುಹಿಸಿಕೊಡಲಾಗಿತ್ತೆಂದು ಹೇಳಿದ್ದಾರೆಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.