
ಬೆಂಗಳೂರು, ಜೂನ್ 10– ಕಳೆದ ಎರಡು ವರ್ಷಗಳಿಂದ ಕಾಲವು ಅಡ್ಡಿ, ಆತಂಕಗಳನ್ನು ದಾಟಿ, ಮಾರ್ಚಿ ತಿಂಗಳಿನಿಂದ ಜಾರಿಗೆ ಬಂದಿರುವ ಕರ್ನಾಟಕ ಭೂಸುಧಾರಣ ಶಾಸನವು ಕಾರ್ಯತಃ ಅನುಷ್ಠಾನಕ್ಕೆ ಬರುವ ಮುನ್ನವೇ ಗಂಭೀರ ತೊಡಕಿನಲ್ಲಿ ಮುಗ್ಗರಿಸುವ ಪರಿಸ್ಥಿತಿ ಉದ್ಭವವಾಗಿದೆ.
ಶಾಸನದ ಪ್ರಕಾರ, ಪಂಚಯ್ತಿಗಳು ರಚನೆಯಾಗುವ ಮುನ್ನವೇ, ಗೇಣಿ ಹಕ್ಕು ವಿವಾದಾಸ್ಪದವಾಗಿರುವ ಪ್ರಕರಣಗಳಲ್ಲಿ ನ್ಯಾಯಾಲಯಗಳಿಂದ ಭೂಮಾಲೀಕರು, ಗೇಣಿದಾರರಿಗೆ ಜಮೀನು ಕಾಯಂ ಆಗುವುದಕ್ಕೆ ತಡೆಯಾಜ್ಞೆ ತರುವುದರಲ್ಲಿ ಯಶಸ್ವಿಯಾಗಿದ್ದಾರೆ.
ಶಾಸನವು ಎಲ್ಲ ರೀತಿಗಳಲ್ಲಿಯೂ ಭದ್ರ ಎಂದು ನಂಬಿಕೊಂಡಿದ್ದ, ಅಧಿಕೃತ ವಲಯಗಳಿಗೆ ಈ ಬೆಳವಣಿಗೆ ತೀರಾ ಅನಿರೀಕ್ಷಿತ ಪಟ್ಟಿನಂತೆ ಬಿದ್ದಿದ್ದು ಕಳೆದ ಎರಡು ದಿನಗಳಿಂದ ಅದಕ್ಕೆ ತುತ್ತು ಪರಿಹಾರ ಹುಡುಕುವಲ್ಲಿ ಪರದಾಟ ಆರಂಭವಾಗಿದೆ.
ಬೆಂಗಳೂರು, ಜೂನ್ 10– ದಕ್ಷಿಣ ಭಾರತದ ‘ಕಾಶ್ಮೀರ’ ಎಂದೇ ಹೆಸರಾಗಿರುವ ಬೆಂಗಳೂರು ನಗರ ತನ್ನ ಹೆಸರನ್ನು ಕಳೆದುಕೊಳ್ಳುತ್ತಿದೆ ಎಂದು ರಾಜ್ಯದ ರಾಜ್ಯಪಾಲ ಶ್ರೀ ಮೋಹನ್ ಲಾಲ್ ಸುಖಾಡಿಯಾ ಅವರು ಇಂದು ವಿಷಾದ ವ್ಯಕ್ತಪಡಿಸಿದರು.
ಇಲ್ಲಿಂದ ಸುಮಾರು 56 ಮೈಲಿ ದೂರದಲ್ಲಿರುವ ದೊಡ್ಡಸಾಗೇರಿ ಗ್ರಾಮದಲ್ಲಿ (ಕೊರಟಗೆರೆ ತಾಲೂಕು) ಅಹೋಬಲಾ ನರಸಿಂಹಸ್ವಾಮಿ ತೋಟವನ್ನು ಉದ್ಘಾಟಿಸಿದ ರಾಜ್ಯಪಾಲರು ಬೆಂಗಳೂರು ನಗರದಲ್ಲಿ ಸಸ್ಯ ಸಂಪತ್ತು ನಶಿಸಿ ಹೋಗುತ್ತಿದ್ದು, ಇದನ್ನು ತಪ್ಪಿಸಲು ಮುಂಜಾಗ್ರತೆ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.