ADVERTISEMENT

50 ವರ್ಷಗಳ ಹಿಂದೆ: ಶನಿವಾರ, ಜೂನ್ 10, 1972 

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 19:30 IST
Last Updated 9 ಜೂನ್ 2022, 19:30 IST
   

ಸಮಾಜವಾದಿ ಹೋರಾಟಗಾರ ಸರ್ವಜನಪ್ರಿಯ ಶಾಂತವೇರಿ ಗೋಪಾಲ ಗೌಡರ ನಿಧನ

ಬೆಂಗಳೂರು, ಜೂನ್‌ 9– ಕರ್ನಾಟಕದಲ್ಲಿ ಸಮಾಜವಾದವನ್ನು ಬೆಳೆಸಿದ ನಾಯಕ ಶ್ರೀ ಶಾಂತವೇರಿ ಗೋಪಾಲ ಗೌಡ ಅವರು ಇಂದು ಬೆಳಗ್ಗೆ 8: 45ರ ಸಮಯದಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿಧನರಾದರು.

ರಕ್ತದ ಒತ್ತಡ ಹೆಚ್ಚಿ ಕಳೆದ ನವೆಂಬರ್‌ 23ರಂದು ಆಸ್ಪತ್ರೆಗೆ ಸೇರಿದ ಶ್ರೀಯುತರು ಆರೋಗ್ಯ ಚೇತರಿಸಿಕೊಳ್ಳದೆ, ಕಳೆದ ಕೆಲ ತಿಂಗಳಿಂದ ಅರೆ ಪ್ರಜ್ಞೆ ಹಾಗೂ ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದರು. ದಿವಂಗತರಿಗೆ 49 ವರ್ಷ ವಯಸ್ಸಾಗಿತ್ತು. ಪತ್ನಿ, ತಾಯಿ, ಅಣ್ಣ ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ.

ADVERTISEMENT

ಮೂರು ದಶಕದಿಂದ ಕಳೆದ ಸುಮಾರು 30 ವರ್ಷಗಳ ಕಾಲದಲ್ಲಿ ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ತನ್ನದೇ ಆದ ಪ್ರಭಾವಬೀರಿ ನೀತಿ–ನ್ಯಾಯ ನಿಷ್ಠೆಗೆ, ಪ್ರಾಮಾಣಿಕತೆಗೆ, ಅದರೊಡನೆ ಸರಳ–ಸೌಜನ್ಯಕ್ಕೆ ಹೆಸರಾದವರು ಎಂದು ಅನಿಸಿಕೊಂಡಿದ್ದ ಶ್ರೀ ಗೋ‍ಪಾಲಗೌಡ ಅವರು ಇನ್ನು ಹೆಚ್ಚು ಕಾಲ ಬದುಕುವುದಿಲ್ಲ ಎಂದು ಇತ್ತೀಚೆಗೆ ಸ್ಪಷ್ಟವಾಗಿ ತಿಳಿದಿತ್ತು.

ರಾಜ್ಯಾದ್ಯಂತ ನಗರ, ರಸ್ತೆ ಹೆಸರು ಕನ್ನಡದಲ್ಲಿ ಬರೆಸಲು ಮುಖ್ಯ ಎಂಜಿನೀರ್‌ಗೆ ಆದೇಶ
ಬೆಂಗಳೂರು, ಜೂ. 9–
ರಾಜ್ಯದಾದ್ಯಂತ ನಗರ, ಪಟ್ಟಣ, ಗ್ರಾಮಗಳು ಹಾಗೂ ರಸ್ತೆಗಳ ಹೆಸರುಗಳನ್ನು ಕನ್ನಡದಲ್ಲಿ ಬರೆಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ ಸಂಪರ್ಕ ಮತ್ತು ನಿರ್ಮಾಣ ವಿಭಾಗದ ಮುಖ್ಯ ಎಂಜಿನಿಯರ್‌ಗೆ ಆದೇಶ ನೀಡಿದೆ.

ಅಧಿಕೃತ ಭಾಷಾ ಅಭಿವೃದ್ಧಿಗೆ ಹಲವಾರು ಮಾರ್ಗಗಳನ್ನು ಸೂಚಿಸಿ ಕಳೆದ ವರ್ಷ ಸಮಿತಿಯೊಂದು ಸಲ್ಲಿಸಿದ ವರದಿ ಶಿಫಾರಸುಗಳನ್ನು ಒಟ್ಟಿನಲ್ಲಿ ಒಪ್ಪಿಕೊಂಡಿರುವ ಸರ್ಕಾರವು ಸಬ್‌ ಡಿವಿಜನ್‌ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಕನ್ನಡದ ಬಳಕೆಯನ್ನು ವಿಸ್ತರಿಸಿ ಈಗಾಗಲೇ ಆಜ್ಞೆ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.