ADVERTISEMENT

50 ವರ್ಷಗಳ ಹಿಂದೆ: ಗುರುವಾರ 9–11–1972

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 19:30 IST
Last Updated 8 ನವೆಂಬರ್ 2022, 19:30 IST
   

ರಿಚರ್ಡ್ ನಿಕ್ಸನ್ ಮತ್ತೆ ಶ್ವೇತಭವನಕ್ಕೆ: ಪ್ರಚಂಡ ಬಹುಮತ

ವಾಷಿಂಗ್ಟನ್, ನ. 8– ಅಧ್ಯಕ್ಷ ರಿಚರ್ಡ್ ಎಂ. ನಿಕ್ಸನ್ ಅವರು ಪ್ರಚಂಡ ಬಹುಮತ ದಿಂದ ನಿನ್ನೆ ರಾತ್ರಿ ಅಮೆರಿಕದ ಅಧ್ಯಕ್ಷ ಗದ್ದುಗೆಗೆ ಪುನರಾಯ್ಕೆಯಾಗಿ ಶ್ವೇತಭವನದಲ್ಲಿ ಮತ್ತೆ ನಾಲ್ಕು ವರ್ಷಗಳ ಅಧಿಕಾರವನ್ನು ಸ್ಥಿರಪಡಿಸಿಕೊಂಡರು.

ಅವರ ಪ್ರತಿಸ್ಪರ್ಧಿ ಮೆಕ್‌ಗವರ್ನ್ 1864ರಿಂದೀಚೆಗೆ ಯಾವುದೇ ಡೆಮಾಕ್ರಟಿಕ್ ಅಭ್ಯರ್ಥಿ ಕಾಣದ ಭಾರೀ ಪರಭಾವವನ್ನು ಕಂಡರು.

ADVERTISEMENT

ಆದರೆ, ಡೆಮಾಕ್ರಟಿಕರ ಕೈಹಿಡಿತದಿಂದ ಕಾಂಗ್ರೆಸ್‌ ಅನ್ನು ತಪ್ಪಿಸಲು ರಿಪಬ್ಲಿಕನ್ನರು ವಿಫಲರಾಗಿದ್ದಾರೆ. ನಿಕ್ಸನ್ನರ ಚುನಾವಣೆ ಅವರಿಗೆ ವೈಯಕ್ತಿಕ ವಿಜಯವಾಗಿದ್ದರೂ ಕೊನೆಯ ಪಕ್ಷ ಎರಡು ವರ್ಷ ಅವರು ವಿಭಕ್ತರಾಗಿರುವ ಸರ್ಕಾರವನ್ನು ಎದುರಿಸಬೇಕಾಗಿದೆ. ಕಾಂಗ್ರೆಸ್ ಮೇಲೆ ಡೆಮಾಕ್ರಟಿಕ್ ಬಿಗಿಮುಷ್ಟಿ ಸಡಿಲವಾಗದಿರುವುದೇ ಇದಕ್ಕೆ ಕಾರಣ.

ಡಿಎಂಕೆ ವಿರಸ ಕೇವಲ ಆವುಟ: ಸಂಪುಟದ ಅವಸಾನ ಖಚಿತ

ವೆಲ್ಲೂರು, ನ. 8– ಡಿಎಂಕೆ ಸರ್ಕಾರದ ಗತಿ ಬಹುಮಟ್ಟಿಗೆ ಕುಸಿಯುವ ಘಟ್ಟ ಮುಟ್ಟಿದೆ ಯೆಂದು ಸಂಸ್ಥಾ ಕಾಂಗ್ರೆಸ್ ನಾಯಕ ಕೆ. ಕಾಮರಾಜ್ ಅವರು ಇಂದು ಹೇಳಿ, ಅದು ಇನ್ನು ಉಳಿಯಲಾರದೆಂದರು.

ತಿರುವಾಹಿತಿಪುರಂನಲ್ಲಿ ಕಾಮರಾಜ್ ಅವರು ನಿನ್ನೆ ಒಂದು ಬಹಿರಂಗ ಸಭೆಯಲ್ಲಿ ಮಾತನಾಡಿ, ಡಿಎಂಕೆ ಸರ್ಕಾರ ಉಳಿಯದೆಂಬುದನ್ನು ಗ್ರಹಿಸಿ ಕೆಲವರು ಆ ಪಕ್ಷದಿಂದ ಹೊರಬರುತ್ತಿದ್ದಾರೆಂದೂ, ಇಷ್ಟು ದಿನಗಳು ಇಂತಹವರೇ ಭ್ರಷ್ಟಾಚಾರ ಮತ್ತು ದುರಾಚಾರಗಳನ್ನು ಪೋಷಿಸುತ್ತಿದ್ದರೆಂಬುದನ್ನು ಜನರು ಅರಿಯಬೇಕೆಂದೂ, ಅದರ ಎರಡು ಗುಂಪುಗಳು ಕೇವಲ ‘ಆವುಟ ಹೂಡಿ ನಾಟಕ ಆಡುತ್ತಿವೆ’ ಎಂದೂ ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.