ADVERTISEMENT

ಸೋಮವಾರ, 8–1–1968

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 19:30 IST
Last Updated 7 ಜನವರಿ 2018, 19:30 IST
ಸೋಮವಾರ, 8–1–1968
ಸೋಮವಾರ, 8–1–1968   

ನೂತನ ಕಾಂಗ್ರೆಸ್ ಅಧ್ಯಕ್ಷರಿಗೆ ಆಂಧ್ರ ಜನತೆಯ ಭವ್ಯ ಸ್ವಾಗತ

(ಎಸ್.ವಿ. ಜಯಶೀಲರಾವ್‌ ಅವರಿಂದ)

ಲಾಲ್‌ಬಹಾದುರ್‌ನಗರ, ಜ. 7– ಹೈದರಾಬಾದು– ಸಿಕಂದರಾಬಾದಿನ ಐದು ಲಕ್ಷಕ್ಕೂ ಹೆಚ್ಚು ಜನರು ಸುಮಾರು ಎಂಟು ಮೈಲಿ ಉದ್ದದ ರಸ್ತೆಯಲ್ಲಿ ಸಂಭ್ರಮದಿಂದ ನೆರೆದಿದ್ದು ಕಾಂಗ್ರೆಸಿನ ನೂತನ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಮತ್ತು ನಿವೃತ್ತರಾಗಲಿರುವ ಅಧ್ಯಕ್ಷ ಶ್ರೀ ಕಾಮರಾಜ್ ಅವರಿಗೆ ವೈಭವಪೂರ್ಣ ಸ್ವಾಗತ ನೀಡಿ ಇಂದು ಬೆಳಿಗ್ಗೆ ಇಲ್ಲಿ ಬರಮಾಡಿಕೊಂಡರು.

ADVERTISEMENT

ದಿವಂಗತ ನೆಹರೂರವರು ಪ್ರಧಾನಿಯಾಗಿ ಇಲ್ಲಿಗೆ ಪ್ರಥಮ ಭೇಟಿ ನೀಡಿದ ಸಂದರ್ಭವನ್ನು ಬಿಟ್ಟರೆ ಅದರಿಂದೀಚೆಗೆ ಅತಿಥಿಯನ್ನು ಸ್ವಾಗತಿಸಲು ಇಷ್ಟು ಸಂಖ್ಯೆಯಲ್ಲಿ ಜನ ಸೇರಿರಲಿಲ್ಲ.

ಚಿರಕುಮಾರರು

ಲಾಲ್‌ಬಹಾದುರ್‌ನಗರ, ಜ. 7– ‘ಯೌವ್ವನದ ಹುರುಪು ಇರುವವರೆಲ್ಲಾ ಯುವಕರು. ಇದಕ್ಕೆ ವಯಸ್ಸು ಕಾರಣವಲ್ಲ’

ಇಂದು ಇಲ್ಲಿ ಆಂಧ್ರಪ್ರದೇಶ ಯುವಕ ಕಾಂಗ್ರೆಸ್ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ನಾಯಕರ ನುಡಿಯಿದು.

‘ಅರವತ್ತು ವಯಸ್ಸಿನ ಕೆಳಗಿನವರೆಲ್ಲಾ ಯುವಕರು ಎಂದು ಆಂಧ್ರ ಮುಖ್ಯಮಂತ್ರಿ ಶ್ರೀ ಬ್ರಹ್ಮಾನಂದ ರೆಡ್ಡಿ ಹೇಳಿದ್ದಾರೆ, ಆ ಮಾತು ನಿಜ. ರೆಡ್ಡಿಯವರೂ ಯುವಕರು. ಅಂತೆಯೇ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರೂ ಯುವಕರು’ ಎಂದು ಸಮ್ಮೇಳನವನ್ನು ಉದ್ಘಾಟಿಸಿದ ಪ್ರಧಾನಿ ಇಂದಿರಾ ಗಾಂಧಿ ಅವರು ಹೇಳಿದರು.

ಯೌವ್ವನದ ಹುಮ್ಮಸ್ಸಿನ ಪ್ರಧಾನಿಯವರೆ, ತರುಣ–ತಾರುಣ್ಯದ ಮುಖ್ಯಮಂತ್ರಿಯವರೆ...’ ಎಂದು ಅಧ್ಯಕ್ಷತೆ ವಹಿಸಿದ್ದ ಶ್ರಿ ನಿಜಲಿಂಗಪ್ಪನವರು ಭಾಷಣ ಆರಂಭ ಮಾಡಿದರು.

ಮುಂದುವರಿದು ‘ವೃದ್ಧ ನಿಮ್ಮನ್ನು ಈಗ ಉದ್ದೇಶಿಸಿ ಮಾತನಾಡುತ್ತಿದ್ದಾನೆ (ನಗು). ಆದರೆ ನಾನು ಬಹಳ ವೃದ್ಧ ಎಂದು ಭಾವಿಸಬೇಡಿ, ನಾನು ಯೌವ್ವನದ ಹುರುಪಿನಿಂದಿದ್ದೇನೆ’ ಎಂದು ಶ್ರೀ ನಿಜಲಿಂಗಪ್ಪ ತಿಳಿಸಿದರು.

ಚರಣ್‌ಸಿಂಗ್ ಸಂಪುಟಕ್ಕೆ ಇನ್ನಷ್ಟು ಸಚಿವರು

ಲಖನೌ, ಜ. 7– ಚರಣ್‌ಸಿಂಗರ ಸಂಪುಟಕ್ಕೆ ಮೂವರು ಸಚಿವರೂ, ಇಬ್ಬರು ಉ‍ಪ ಸಚಿವರೂ ನಾಳೆ ಸೇರಲಿರುವರೆಂದು ನಂಬಲರ್ಹವಾಗಿ ತಿಳಿದುಬಂದಿದೆ. ನಾಳೆ ಬೆಳಿಗ್ಗೆ ಇವರು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸುವರು.

ಪ್ರತ್ಯೇಕತೆ ವಿರುದ್ಧ ಕಾಮರಾಜ್ ಎಚ್ಚರಿಕೆ

ಲಾಲ್‌ಬಹಾದುರ್‌ನಗರ, ಜ. 7– ರಾಷ್ಟ್ರದ ಸಮಗ್ರತೆ ಹಾಗೂ ಭಾರತ ಒಂದು ರಾಷ್ಟ್ರ ಎಂಬ ಭಾವನೆಗೆ ಭಂಗ ಉಂಟು ಮಾಡುವ ಬೆದರಿಕೆಯನ್ನೊಡ್ಡುತ್ತಿರುವ ಪ್ರತ್ಯೇಕತಾ ಮನೋಭಾವ ಪುನಃ ಗೋಚರಿಸುತ್ತಿರುವುದರ ಬಗ್ಗೆ ಅಧಿಕಾರ ಬಿಟ್ಟು ಕೊಡುತ್ತಿರುವ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಮರಾಜರು ಕಾಂಗ್ರೆಸ್ ಕಾರ್ಯಕರ್ತರಿಗೆ ಎಚ್ಚರಿಕೆಯಿತ್ತಿದ್ದಾರೆ.

ಭಾರತದ ಹೈಕಮೀಷನ್ಕಾ ರ್ಯದರ್ಶಿ ಓಜಾ ಸ್ವದೇಶಕ್ಕೆ

ಕಲ್ಕತ್ತ, ಜ. 7– ಡಾಕಾದಲ್ಲಿನ ಭಾರತದ ಡೆಪ್ಯೂಟಿ ಹೈಕಮೀಷನರ್ ಕಚೇರಿಯ ಪ್ರಥಮ ಕಾರ್ಯದರ್ಶಿ ಶ್ರೀ ಪಿ.ಎನ್. ಓಜಾ ಅವರು ಪೂರ್ವ ಪಾಕಿಸ್ತಾನದಿಂದ ಹರಿದಾಸ್‌ಪುರದ ಮೂಲಕ ಪಶ್ಚಿಮ ಬಂಗಾಳಕ್ಕೆ ಇಂದು ಸಂಜೆ ಪ್ರವೇಶಿಸಿದರೆಂದು ಇಲ್ಲಿನ ಅಧಿಕೃತ ವಲಯಗಳಿಂದ ತಿಳಿದು ಬಂದಿದೆ.

ಕಾರ್ಯಕಾರಿ ಸಮಿತಿಗೆ ನಾಮಕರಣ: ಬಿಸಿರಕ್ತಕ್ಕೆ ಪ್ರಾತಿನಿಧ್ಯ ಕೊಡಲು ಒತ್ತಾಯ

ಲಾಲ್‌ಬಹಾದುರ್‌ನಗರ, ಜ. 7– ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ನಾಮಕರಣವಾಗುವ ಸದಸ್ಯರಲ್ಲಿ ಶೇಕಡ 50ರಷ್ಟು ಮಂದಿಯಾದರೂ 50 ವರ್ಷ ವಯಸ್ಸಿನೊಳಗಿರುವ ಹಾಗೂ ಸಮಾಜವಾದ ತತ್ವಗಳಲ್ಲಿ ಏಕನಿಷ್ಠೆ ಹೊಂದಿರುವ ವ್ಯಕ್ತಿಗಳಾಗಿರಬೇಕು.

ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷದ ‘ತೀವ್ರವಾದಿಗಳ’ ಬೇಡಿಕೆಯಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.