75 ವರ್ಷಗಳ ಹಿಂದೆ
ಮದರಾಸ್, ಜುಲೈ 11– ಗಡಿನಾಡಿನ ಪ್ರದೇಶದಲ್ಲಿ ಖಾನ್ ಅಬ್ದುಲ್ ಗಫಾರ್ ಖಾನ್, ಡಾ. ಖಾನ್ ಸಾಹೇಬ್ ಮತ್ತು ನೂರಾರು ಖುದಾಯಿ ಖಿದ್ಮತ್‌ಗಾರರು ಬಂಧನವಾಗಿರುವ ಬಗ್ಗೆ ಸೋಷಲಿಸ್ಟ್ ಪಕ್ಷವು ಕಳವಳ ವ್ಯಕ್ತಪಡಿಸಿ, ಅವರನ್ನು ತಡಮಾಡದೆ ಬಿಡುಗಡೆ ಮಾಡಬೇಕೆಂದು ಪಾಕಿಸ್ತಾನದ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುವ ನಿರ್ಣಯವನ್ನು ಅಂಗೀಕರಿಸಿತು.
ಭಾರತ, ಪಾಕಿಸ್ತಾನದಲ್ಲಿ ಎಲ್ಲ ರಾಜಕೀಯಾಭಿಪ್ರಾಯದವರಿಗೂ ಪೂರ್ಣ ಪೌರ ಸ್ವಾತಂತ್ರ್ಯವು ಪುನರುತ್ಥಾಪನೆಯಾಗಬೇಕೆಂದೂ ಇದರಿಂದ ಉಭಯ ಪಕ್ಷಗಳ ಬಾಂಧವ್ಯವು ಬೆಳೆಯುವುದೆಂದೂ ಸೋಷಲಿಸ್ಟ್ ಪಕ್ಷದ ಸಮ್ಮೇಳನವು ಸೂಚಿಸಿತು.
ನವದೆಹಲಿ, ಜುಲೈ 11– ಅಕಾಲಿ ನಾಯಕ ಮಾಸ್ಟರ್ ತಾರಾಸಿಂಗ್ ಅವರ ಚಟುವಟಿಕೆಗಳನ್ನು ಕೇಂದ್ರದ ಗೃಹ ಸಚಿವ ಶಾಖೆಯವರು ತೀವ್ರ ಭಾವನೆಯಿಂದ ವೀಕ್ಷಿಸುತ್ತಿದ್ದಾರೆ. ಇತ್ತೀಚೆಗೆ ಆತ ಸಿಖ್ಖರನ್ನು ಕಾಂಗ್ರೆಸ್ಸಿನಿಂದ ಈಚೆಗೆ ಸೆಳೆದುಕೊಳ್ಳುಲು ಪ್ರಯತ್ನಿಸುತ್ತಿದ್ದಾರೆ, ಕೋಮುವಾರು ಭಾವನೆಯನ್ನು ಉಗ್ರರೂಪದಲ್ಲಿ ಪ್ರಚಾರ ಮಾಡುತ್ತಿದ್ದಾರೆ.
ಪಂಥ್ ಮಾರ್ಗದ ವೈಭವದ ಪುನರುತ್ಥಾನದ ಪೂರ್ಣ ಅಧಿಕಾರವನ್ನು ಮಾಸ್ಟರ್ ತಾರಾಸಿಂಗ್ ಅವರಿಗೆ ಇತ್ತೀಚೆಗೆ ಸೇರಿದ್ದ ಅಕಾಲಿ ಸಮ್ಮೇಳನದಲ್ಲಿ ಕೊಡಲಾಯಿತು. ಅಂದಿನಿಂದ ಅವರು, ಪಂಜಾಬ್ ಶಾಸನ ಸಭೆಯ ಸಿಖ್ ಸದಸ್ಯರು ಕಾಂಗ್ರೆಸ್ ಸೇರಲು ಕಾರಣವಾದ ಒಪ್ಪಂದವನ್ನು ರದ್ದುಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.