
ನಟಿ ಸಾಕ್ಷಿ ಶಿವಾನಂದ ‘ದ್ವಿಪಾತ್ರ’ ರಹಸ್ಯ ಬಯಲು
ಕುಂದಾಪುರ, ಮಾ. 2– ಕಳೆದ ವರ್ಷದ ಯಶಸ್ವಿ ಚಿತ್ರ ‘ಗಲಾಟೆ ಅಳಿಯಂದ್ರು’ ಸೇರಿದಂತೆ ಕನ್ನಡ ಮತ್ತು ವಿವಿಧ ಭಾಷೆಗಳ ಸುಮಾರು 20 ಚಿತ್ರಗಳಲ್ಲಿ ನಟಿಸಿರುವ ಸಾಕ್ಷಿ ಶಿವಾನಂದ ಎಂಬ ನಟಿ ತನ್ನಂತೆಯೇ ಇರುವ ಅವಳಿ ಸೋದರಿಯನ್ನು ತನ್ನ ಬದಲಿಗೆ ಚಿತ್ರೀಕರಣಕ್ಕೆ ಬಳಸಿಕೊಳ್ಳುತ್ತಿದ್ದ ಕುತೂಹಲಕರ ಪ್ರಕರಣ ಬಯಲಿಗೆ ಬಂದಿದೆ.
ಸಾಕ್ಷಿಯ ಮೂಲ ಹೆಸರು ಶಿಬಾ. ಆಕೆಯಂತೆಯೇ ಕಾಣುವ ಅವಳಿ ಸೋದರಿ ಶಿಖಾ. ಈ ಶಿಬಾ–ಶಿಖಾ ಸೋದರಿಯರು ‘ಸಾಕ್ಷಿ ಶಿವಾನಂದ’ ಹೆಸರಿನಲ್ಲಿ ಕಳೆದ ಹತ್ತು ವರ್ಷಗಳಿಂದ ಚಿತ್ರರಂಗಕ್ಕೆ ಗೊತ್ತಾಗದಂತೆ ಏಕಪಾತ್ರದ ಅಭಿನಯದಲ್ಲಿ ಮೆರೆದಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ರಹಸ್ಯ ವಾಗಿದ್ದ ಸೋದರಿಯರ ‘ಅಭಿನಯ’ ಶಾಸಕ ಯೋಗೀಶ್ವರ್ ನಿರ್ಮಾಣದ ‘ಸೈನಿಕ’ ಚಿತ್ರದ ಚಿತ್ರೀಕರಣ ಇಲ್ಲಿಗೆ ಸಮೀಪದ ಕೋಣೆ ಗ್ರಾಮದಲ್ಲಿ ಕೆ.ಎಲ್. ಮಧ್ಯಸ್ಥ ಅವರ ಮನೆಯಲ್ಲಿ ನಡೆಯುತ್ತಿರುವ ವೇಳೆ ಬಯಲಿಗೆ ಬಂದಿದೆ.
______________
ಬುದ್ಧನ ಶಿಲಾ ಪ್ರತಿಮೆ ಮೇಲೆ ರಾಕೆಟ್, ಗುಂಡಿನ ದಾಳಿ
ಕಾಬೂಲ್, ಮಾ.2 (ರಾಯಿಟರ್ಸ್)– ವಿಶ್ವ ಸಮುದಾಯದ ತೀವ್ರ ಪ್ರತಿಭಟನೆ ನಡುವೆಯೂ ಬಮಿಯನ್‌ನಲ್ಲಿನ ವಿಶ್ವ ವಿಖ್ಯಾತ ಬುದ್ಧನ ಶಿಲಾಪ್ರತಿಮೆಗಳ ಮೇಲೆ ಇಂದು ರಾಕೆಟ್ ದಾಳಿಯನ್ನು ನಡೆಸಿ ಗುಂಡಿನ ಮಳೆ ಸುರಿಸಲಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.