
25 ವರ್ಷಗಳ ಹಿಂದೆ ಈ ದಿನ
ಮಂಗಳವಾರ, 20.02.2001
ನವದೆಹಲಿ, ಫೆ. 19– ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸಕ್ಕೆ ಅಂದು ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರವೇ ಸಂಪೂರ್ಣ ಹೊಣೆ ಎಂದು ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಇಂದು ಆಪಾದಿಸಿದರು.
ಮಸೀದಿ ಧ್ವಂಸ ಪ್ರಕರಣದ ತನಿಖೆ ನಡೆಸುತ್ತಿರುವ ಲಿಬರ್‌ಹಾನ್ ಆಯೋಗದ ಮುಂದೆ ಅವರು ಇಂದು ಸಾಕ್ಷಿ ನೀಡಿದರು. ಮಸೀದಿಯನ್ನು ರಕ್ಷಿಸುವುದಾಗಿ ಕಲ್ಯಾಣ್ ಸಿಂಗ್ ಸರ್ಕಾರ ತಮಗೆ ಹಲವು ವೇದಿಕೆಗಳಲ್ಲಿ ‘ಸ್ಪಷ್ಟ ಮತ್ತು ನಿಖರ ಭರವಸೆ’ ನೀಡಿತ್ತು ಎಂದು ಅವರು ಹೇಳಿದರು.
ಬೆಂಬಲ ಬೆಲೆ ಖರೀದಿ ಕೈಬಿಡಲು ಕೇಂದ್ರ ಪರಿಶೀಲನೆ
ಬೆಂಗಳೂರು, ಫೆ. 19– ಬೆಂಬಲ ಬೆಲೆ ನೀಡಿ ಧಾನ್ಯಗಳನ್ನು ಖರೀದಿ ಮಾಡುವುದರಿಂದ ಸಹಾಯಧನದ ರೂಪದಲ್ಲಿ ಬೊಕ್ಕಸದ ಮೇಲೆ ತೀವ್ರ ಹೊರೆ ಬೀಳುತ್ತಿರುವುದರಿಂದ ಮುಂದಿನ ವರ್ಷದಿಂದ ಬೆಂಬಲ ಬೆಲೆ ಖರೀದಿಯನ್ನೇ ಕೇಂದ್ರ ಸರ್ಕಾರ ಕೈಬಿಡಲು ಚಿಂತಿಸುತ್ತಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಶಾಂತಕುಮಾರ್ ಅವರು ಈಚೆಗೆ ಈ ಇಂಗಿತ ವ್ಯಕ್ತಪಡಿಸಿದ್ದು, ಆ ಸಭೆಯಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳೂ ಭಾಗವಹಿಸಿದ್ದರು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.