ADVERTISEMENT

ಭಾನುವಾರ, 24–8–1969

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 20:00 IST
Last Updated 23 ಆಗಸ್ಟ್ 2019, 20:00 IST
   

ಇಂದಿರಾ ನಾಯಕತ್ವದಲ್ಲಿ ಪೂರ್ಣ ವಿಶ್ವಾಸ– ಇನ್ನೂರಕ್ಕೂ ಹೆಚ್ಚು ಕಾಂಗ್ರೆಸ್ ಎಂ.ಪಿ.ಗಳ ನಿರ್ಣಯ

ನವದೆಹಲಿ, ಆ. 23– ಕಾಂಗ್ರೆಸ್‌ ಎಂ.ಪಿ.ಗಳು ಅಧಿಕ ಸಂಖ್ಯೆಯಲ್ಲಿ ಇಂದು ಇಲ್ಲಿ ಸಮಾವೇಶಗೊಂಡು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರ ನಾಯಕತ್ವದಲ್ಲಿ ತಮ್ಮ ಪೂರ್ಣ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಪ್ರಧಾನಿ ಇಂದಿರಾ ಗಾಂಧಿ ಅವರ ವಿರುದ್ಧ ಶಿಸ್ತಿನ ಕ್ರಮಗಳನ್ನು ಕೈಗೊಳ್ಳಬಾರದೆಂಬ ಒತ್ತಾಯದ ಅರ್ಥ ಬರುವ ನಿರ್ಣಯವನ್ನೂ ಅವರು ಅಂಗೀಕರಿಸಿದ್ದಾರೆ.

ADVERTISEMENT

ಇನ್ನೂರಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಎಂ.ಪಿ.ಗಳು ಮಾಜಿ ಕಾಂಗ್ರೆಸ್ ಅಧ್ಯಕ್ಷ ಸಂಜೀವಯ್ಯನವರ ನಿವಾಸದ ಮೈದಾನದಲ್ಲಿ ಸಂಜೆ ಸೇರಿದ್ದರು. ನಿರ್ಣಯಕ್ಕೆ 248 ಸದಸ್ಯರ ಸಹಿ, ರಾತ್ರಿಯ ವೇಳೆಗೆ ಸಂಗ್ರಹವಾಗಿತ್ತು. ಸೋಮವಾರದ ವೇಳೆಗೆ ಮುನ್ನೂರಕ್ಕೂ ಹೆಚ್ಚು ಸಹಿಗಳು ಈ ನಿರ್ಣಯಕ್ಕೆ ಬೀಳಬಹುದೆಂದು ಇಂದಿರಾ ಗಾಂಧಿ ಬೆಂಬಲಿಗರು ಹೇಳುತ್ತಿದ್ದಾರೆ.

ಅಧಿಕೃತ ಅಭ್ಯರ್ಥಿ ಸೋಲಿಗೆ ಇಂದಿರಾ ಗುಂಪು ಕಾರಣ: ಅಶಿಸ್ತು ವಿರುದ್ಧ ಕ್ರಮಕ್ಕೆ ಆಗ್ರಹ

ಬೆಂಗಳೂರು, ಆ. 23– ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸ್ಥೆಯ ಹಿತಕ್ಕೆ ವಿರುದ್ಧವಾಗಿ ಕೆಲಸ ಮಾಡಿದ ಹಾಗೂ ಸಂಸ್ಥೆಯ ಶಿಸ್ತನ್ನು ಉಲ್ಲಂಘಿಸಿದವರ ಮೇಲೆ ಕಟ್ಟುನಿಟ್ಟಾದ ಶಿಸ್ತಿನ ಕ್ರಮ ಜರುಗಿಸಬೇಕೆಂದು ಇಂದು ನಡೆದ ಮೈಸೂರು ಪ್ರದೇಶ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಒತ್ತಾಯ ಮಾಡಿತು.

ಸುಮಾರು 3 ಗಂಟೆಗಳ ಕಾಲ ಜರುಗಿದ ಸಮಿತಿಯ ಜರೂರು ಸಭೆ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ನಾಯಕತ್ವದಲ್ಲಿರುವ ಗುಂಪು ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧಿಯ ಸೋಲಿಗೆ ಕಾರಣವೆಂದು ಸ್ಪಷ್ಟಪಡಿಸಿತು.

ಸರ್ವಾನುಮತದಿಂದ ಸಮಿತಿ ಅಂಗೀಕರಿಸಿದ ನಿರ್ಣಯದಲ್ಲಿ ‘ಇದು ಒಳಗಿನಿಂದಲೇ ಸಂಸ್ಥೆಯನ್ನು ನಾಶಪಡಿಸುವ ಪ್ರಯತ್ನವೂ ಹೌದು’ ಎಂದು ಅಭಿಪ್ರಾಯಪಟ್ಟಿದೆ.

‘ಕಾದು ನೋಡಿ’ ಕಾಂಗ್ರೆಸ್ ಬಿಕ್ಕಟ್ಟು ಬಗ್ಗೆ ಕಾಮರಾಜ್

ಮದ್ರಾಸ್, ಆ. 23– ದೆಹಲಿಯಿಂದ ಇಂದು ಮಧ್ಯಾಹ್ನ ಇಲ್ಲಿಗೆ ಆಗಮಿಸಿದ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಕಾಮರಾಜ್ ಅವರು ಕಾಂಗ್ರೆಸ್ ಪಕ್ಷದೊಳಗಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಲು ನಿರಾಕರಿಸಿದರು.

ಅವರು ತ್ಯಾಗರಾಜ ನಗರದಲ್ಲಿರುವ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಪ್ರಶ್ನೆಗೆ ಉತ್ತರ ಕೊಡಲು ನಿರಾಕರಿಸಿ ‘ಸೋಮವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಸೇರಲಿದೆ. ಕಾದು ನೋಡೋಣ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.