ADVERTISEMENT

25 ವರ್ಷಗಳ ಹಿಂದೆ | ಬುಧವಾರ, 26–7–1995

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 19:30 IST
Last Updated 25 ಜುಲೈ 2020, 19:30 IST

ಕಾಂಗೈಗೆ ಜನಸಂಪರ್ಕದ ಕೊರತೆ– ಪ್ರಧಾನಿ ಒಪ್ಪಿಗೆ

ನವದೆಹಲಿ, ಜುಲೈ 25– ಕೇಂದ್ರ ಸರ್ಕಾರದ ಆರ್ಥಿಕ ಕಾರ್ಯಕ್ರಮಗಳು ಬಡವರ ಪರವಾಗಿದ್ದು, ಅವುಗಳನ್ನು ಸರಿಯಾಗಿ ಆ ವರ್ಗಗಳಿಗೆ ಮನವರಿಕೆ ಮಾಡಿಕೊಟ್ಟು ಜನವಿಶ್ವಾಸವನ್ನು ಗಳಿಸಿ ಕಾಂಗ್ರೆಸ್ಸನ್ನು ಮತ್ತಷ್ಟು ಬಲಿಷ್ಠಗೊಳಿಸಲು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಕ್ರಿಯರಾಗಿ ದುಡಿಯಬೇಕೆಂದು ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಕರೆ ನೀಡಿದ್ದಾರೆ.

ಇಲ್ಲಿಗೆ ಸಮೀಪದ ಸೂರಜ್‌ಕುಂಡ್‌ನಲ್ಲಿ ಇಂದು ಆರಂಭವಾದ ಒಂದು ವಾರದ ಕಾಂಗ್ರೆಸ್‌(ಐ)ನ ಹಿರಿಯ ಕಾರ್ಯಕರ್ತರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಪಕ್ಷದ ಅಧ್ಯಕ್ಷರೂ ಆದ ಪ್ರಧಾನಿಯವರು ಮಾತನಾಡಿದರು. ಈ ಶಿಬಿರದೊಂದಿಗೆ ಕಾಂಗ್ರೆಸ್‌ (ಐ) ವಸ್ತುಶಃ ಲೋಕಸಭಾ ಚುನಾವಣೆಗೆ ಪೂರ್ವಸಿದ್ಧತೆ ಪ್ರಾರಂಭಿಸಿದೆ.

ADVERTISEMENT

ನಿಯಮ ಮೀರಿ ಪ್ರವೇಶ: ಟಿಸಿಎಚ್‌ ಪರೀಕ್ಷೆ ರದ್ದು

ಮಂಡ್ಯ, ಜುಲೈ 25– ಖಾಸಗಿ ಟಿಸಿಎಚ್‌ ಕಾಲೇಜುಗಳು ನಿಯಮ ಮೀರಿ ಸೇರಿಸಿಕೊಂಡಿರುವ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಮಾನವೀಯ ನೆಲೆಯಲ್ಲಿ ನಾಳೆಯಿಂದ ನಡೆಸಲು ಉದ್ದೇಶಿಸಿದ್ದ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ.

ಕೆಲವು ಖಾಸಗಿ ಟಿಸಿಎಚ್‌ ಕಾಲೇಜುಗಳ ಆಡಳಿತ ಮಂಡಳಿಯವರು ಸರ್ಕಾರದ ಮಾನವೀಯ ನಿಲುವನ್ನು ದುರುಪಯೋಗ ಮಾಡಿಕೊಂಡಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ‍್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಚ್‌.ಜಿ.ಗೋವಿಂದೇಗೌಡ ಅವರು ಮಂಗಳವಾರ ಇಲ್ಲಿ ತಿಳಿಸಿದರು.

ಆಡಳಿತ ಮಂಡಳಿಯವರ ತಪ್ಪಿಗೆ ವಿದ್ಯಾರ್ಥಿಗಳಿಗೇಕೆ ಶಿಕ್ಷೆ ಎಂಬ ಮಾನವೀಯ ನೆಲೆಯಲ್ಲಿ ಈ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಅದರಂತೆ ಅಧಿಕಾರಿಗಳಿಂದ ಪರಿಶೀಲಿಸಿದಾಗ ರಾಜ್ಯದ 156 ಟಿಸಿಎಚ್‌ ಶಾಲೆಗಳಲ್ಲಿ ಒಟ್ಟು 3,900 ವಿದ್ಯಾರ್ಥಿಗಳಿರುವುದು ತಿಳಿದುಬಂತು. ಆದರೆ ಪರೀಕ್ಷೆಗೆ ಅರ್ಜಿ ಕರೆದಾಗ ಸುಮಾರು 9 ಸಾವಿರ ಅರ್ಜಿಗಳು ಬಂದವು. ಇದೇನು ಹೀಗೆ ಎಂದು ನೋಡಲು, ಕೆಲವು ಶಾಲೆಗಳ ಆಡಳಿತ ಮಂಡಳಿಯವರು ಪದವಿ ಕಾಲೇಜುಗಳಲ್ಲಿ ಓದುತ್ತಿರುವ ಕೆಲವರಿಂದ ಡೊನೇಷನ್‌ ವಸೂಲಿ ಮಾಡಿ, ತಮ್ಮ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ ಎಂದು ದಾಖಲಿಸಿ ಅರ್ಜಿ ಕಳುಹಿಸಿರುವುದು ಗೊತ್ತಾಯಿತು. ಆದ್ದರಿಂದ ಪರೀಕ್ಷೆ ನಡೆಸದಿರಲು ತೀರ್ಮಾನಿಸಲಾಯಿತು ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.