ADVERTISEMENT

25 ವರ್ಷಗಳ ಹಿಂದೆ | ರಾಷ್ಟ್ರೀಯ ಏಕತೆಗಾಗಿ ಸಿನಿಮಾ ಬಳಕೆಯಾಗಲಿ: ರಾಷ್ಟ್ರಪತಿ ಆಶಯ

ಮಂಗಳವಾರ, 18–7–1995

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 19:45 IST
Last Updated 17 ಜುಲೈ 2020, 19:45 IST

ನವದೆಹಲಿ, ಜುಲೈ 17 (ಯುಎನ್‌ಐ)– ಸಿನಿಮಾದಂಥ ಪ್ರಬಲ ಮಾಧ್ಯಮವನ್ನು ರಾಷ್ಟ್ರೀಯ ಏಕತೆ, ಕೋಮು ಸೌಹಾರ್ದವನ್ನು ಪ್ರೋತ್ಸಾಹಿಸಲು ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ತೋರಲು ಬಳಸಿಕೊಳ್ಳಬೇಕು ಎಂದು ರಾಷ್ಟ್ರಪತಿ ಡಾ. ಶಂಕರ ದಯಾಳ್‌ ಶರ್ಮಾ ಅವರು ಇಂದು ಕರೆ ಇತ್ತರು.

ರಾಜಧಾನಿಯ ವಿಜ್ಞಾನ ಭವನದಲ್ಲಿ ಜರುಗಿದ ವರ್ಣರಂಜಿತ ಸಮಾರಂಭದಲ್ಲಿ ರಾಷ್ಟ್ರಪತಿಯವರು ಭಾರತೀಯ ಚಿತ್ರರಂಗದ ದಿಗ್ಗಜ ದಿಲೀಪ್‌ ಕುಮಾರ್‌ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ‘ಕೊಟ್ರೇಶಿ ಕನಸು’ ಚಿತ್ರದಲ್ಲಿನ ಪ‍್ರಬುದ್ಧ ಪಾತ್ರಕ್ಕಾಗಿ ಮಾಸ್ಟರ್‌ ವಿಜಯ ರಾಘವೇಂದ್ರ ಅತ್ಯುತ್ತಮ ಬಾಲನಟ ಪ್ರಶಸ್ತಿ ಪಡೆದರು. ಜನಪ್ರಿಯ ಚಿತ್ರಕ್ಕಾಗಿ ಇರುವ ಪ್ರಶಸ್ತಿಯು ಸೂರಜ್‌ ಆರ್‌. ಬರ್ಜಾತ್ಯಾ ಅವರ ‘ಹಮ್‌ ಆಪ್‌ ಕೆ ಹೈ ಕೌನ್‌’ಗೆ ಸಂದಿತು.

ವಿದೇಶಿ ಪ್ರವಾಸಿಗರ ಹತ್ಯೆಉಗ್ರರ ಬೆದರಿಕೆ
ಶ್ರೀನಗರ, ಜುಲೈ 17 (ಪಿಟಿಐ, ಯುಎನ್‌ಐ)–
ತನ್ನ ವಶದಲ್ಲಿರುವ ಐವರು ವಿದೇಶಿ ಪ್ರವಾಸಿಗರನ್ನು ಇದೀಗ ಯಾವುದೇ ಕ್ಷಣದಲ್ಲಿ ಕೊಲ್ಲುವುದಾಗಿ ಕಾಶ್ಮೀರದ ಅಲ್‌– ಫರಾನ್‌ ಭಯೋತ್ಪಾದನಾ ತಂಡ ಇಂದು ಸಂಜೆ ಮತ್ತೆ ಬೆದರಿಕೆ ಹಾಕಿದೆ.

ADVERTISEMENT

ತಮ್ಮ ಆಗ್ರಹವನ್ನು ಇಂದು ಸಂಜೆ 6 ಗಂಟೆಯ ಒಳಗೆ ಈಡೇರಿಸಬೇಕು, ಇಲ್ಲವಾದರೆ ಪ್ರವಾಸಿಗರನ್ನು ಕೊಲ್ಲುತ್ತೇವೆ ಎಂದು ಈ ತಂಡ ಈ ತಿಂಗಳ 15ರಂದು ಹೊಸ ಗಡುವು ನೀಡಿತ್ತು. ಪ್ರವಾಸಿಗರನ್ನು 14 ದಿನಗಳ ಹಿಂದೆ ಅಪಹರಿಸಿರುವ ಭಯೋತ್ಪಾದಕರು ಮೊದಲು ಜುಲೈ 15ರವರೆಗೆ ಗಡುವು ನೀಡಿದ್ದರು.

ಬಂಧಿತರಾದ ತಮ್ಮ 21 ಮಂದಿ ಸಹೋದ್ಯೋಗಿ ಭಯೋತ್ಪಾದಕರನ್ನು ಬಿಡುಗಡೆ ಮಾಡಬೇಕು ಎಂಬುದು ಭಯೋತ್ಪಾದಕರ ಬೇಡಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.