ADVERTISEMENT

ವಾಚಕರ ವಾಣಿ: ಹಿಂದಿ ಶಿಕ್ಷಕರಿಗೂ ಕನ್ನಡ ಕಲ್ಪವೃಕ್ಷ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 0:38 IST
Last Updated 26 ಆಗಸ್ಟ್ 2025, 0:38 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಹಿಂದಿ ಶಿಕ್ಷಕರಿಗೂ ಕನ್ನಡ ಕಲ್ಪವೃಕ್ಷ

ತಮಿಳುನಾಡಿನ ಸರ್ಕಾರವು ಹಿಂದಿಯನ್ನು ಒತ್ತಟ್ಟಿಗಿಟ್ಟು ದ್ವಿಭಾಷಾ ನೀತಿಯನ್ನು ಅಪ್ಪಿದಾಗ ಇದ್ದ ಹಿಂದಿ ಶಿಕ್ಷಕರು, ಮುಂದೆ ‘ತಮಿಳು’ ಶಿಕ್ಷಕರಾಗಬೇಕಾಯಿತು. ಕರ್ನಾಟಕ ಸರ್ಕಾರವು ದ್ವಿಭಾಷಾ ಸೂತ್ರ ಹಿಡಿದರೆ ‘ಹಿಂದಿ ಟೀಚರ್‌’ಗಳು ಚಿಂತಿಸಬೇಕಿಲ್ಲ. ಮಕ್ಕಳಿಗೆ ಕಲಿಸಲು ಕನ್ನಡ ‘ಕಲಿತುಕೊಂಡು’ ತಮ್ಮ ಹುದ್ದೆ ಉಳಿಸಿಕೊಳ್ಳಲು ಅಡ್ಡಿಯಿಲ್ಲ.

ADVERTISEMENT

⇒ಡಿ.ವಿ. ಮೋಹನ ಪ್ರಕಾಶ್, ಮೈಸೂರು

ರಕ್ಷಣೆಗೆ ಯಾರ ಮೊರೆ ಹೋಗುವುದು?

‘ಬೀದಿ ನಾಯಿ ರಕ್ಷಿಸಿ ಆಂದೋಲನ’ ನೋಡಿ ಸಂತೋಷ ಮತ್ತು ದಿಗ್ಭ್ರಮೆ ಎರಡೂ ಒಟ್ಟಿಗೆ ಆಯಿತು. ‘ಬೀದಿ ನಾಯಿಗಳಿಂದ ನಮ್ಮನ್ನು ರಕ್ಷಿಸಿ’ ಎಂದು ಬಡ ಪಾದಚಾರಿಗಳು ಯಾರಲ್ಲಿ ಮೊರೆ ಇಡುವುದು ಎಂಬುದು ತಿಳಿಯುತ್ತಿಲ್ಲ. ಸುಪ್ರೀಂ ಕೋರ್ಟ್ ತನ್ನ ತೀರ್ಪು ನೀಡಿದೆ. ಬಿಬಿಎಂಪಿ ಆಡಳಿತ ಕಿವುಡಾಗಿದೆ. ಪಾದಚಾರಿಗಳದ್ದು ಅರಣ್ಯರೋದನವಾಗಿದೆ.

⇒ಚಂದ್ರಶೇಖರ ಎಚ್.ಎಸ್‌., ಬೆಂಗಳೂರು 

ಶಿಕ್ಷಕರ ಗಾಯದ ಮೇಲೆ ಬರೆ

ಬೆಂಗಳೂರಿನ ಬಿಬಿಎಂಪಿಯ ಶಾಲಾ–ಕಾಲೇಜುಗಳಲ್ಲಿ ಸುಮಾರು 804 ಅತಿಥಿ ಶಿಕ್ಷಕರು, ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಸುಮಾರು 15 ವರ್ಷಗಳಿಂದಲೂ ಕಡಿಮೆ ಗೌರವಧನಕ್ಕೆ ದುಡಿಯುತ್ತಿದ್ದ ಅವರಿಗೆ ಇತ್ತೀಚೆಗೆ ಮಾಸಿಕ ₹22,845 ಗೌರವಧನ ನೀಡಲಾಗುತ್ತಿದೆ. ಸರ್ಕಾರದ ಕೆಲ ಗೊಂದಲಕಾರಿ ನಿರ್ಣಯದಿಂದ ಮೂರು ವರ್ಷದಿಂದ ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳ 37 ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಶಿಕ್ಷಕರಿಗೆ, ಬಿಬಿಎಂಪಿಯ ನಿರ್ಧಾರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಡಿಮೆ ಫಲಿತಾಂಶಕ್ಕೆ ಶಿಕ್ಷಕರೊಬ್ಬರೇ ಹೊಣೆಯಲ್ಲ. ಶಿಕ್ಷಕರನ್ನು ಬಲಿಪಶು ಮಾಡುವುದು ಸರಿಯಲ್ಲ.

⇒ಸತ್ಯಮೂರ್ತಿ ಗೂಗಿ, ಬೆಂಗಳೂರು

ಕಪಟ ನಾಟಕ ರೂವಾರಿಗಳಿಗೇನು ಶಿಕ್ಷೆ?

ಭಾರತ ಸನಾತನ ಧರ್ಮದ ನೆಲೆಬೀಡು. ಧಾರ್ಮಿಕ ನಂಬಿಕೆ, ಆಚಾರ ವಿಚಾರ, ಅಪಾರ ಶ್ರದ್ಧೆ, ಸಾಂಸ್ಕೃತಿಕ ಹೊನ್ನ ಮಣ್ಣಿನ ಭೂಮಿ ಇದು. ನಮ್ಮ ಧರ್ಮದ ಮೇಲೆ ಅನಾದಿಕಾಲದಿಂದಲೂ ನಿರಂತರ ದೌರ್ಜನ್ಯ, ಅಪಪ್ರಚಾರ ನಡೆಯುತ್ತಲೇ ಬಂದಿದೆ. ಧರ್ಮಸ್ಥಳದ ತಲೆಬುರುಡೆ ಪ್ರಕರಣ ಇದಕ್ಕೊಂದು ಜೀವಂತ ನಿದರ್ಶನ. ಲಕ್ಷಾಂತರ ದೈವಾರಾಧಕರ ಮನಸ್ಸಿಗೆ ಗಾಸಿ ಉಂಟು ಮಾಡಿ, ಕಪಟ ನಾಟಕವಾಡಿದ ರೂವಾರಿಗಳಿಗೆ ಎಂತಹ ಶಿಕ್ಷೆ ವಿಧಿಸಬೇಕು?  

⇒ಮಂಜುನಾಥ್ ಜೈನ್ ಎಂ.ಪಿ., ಮಂಡ್ಯ 

ತುಮಕೂರು ವಿ.ವಿ.ಗೆ ‘ತೀನಂಶ್ರೀ’ ಹೆಸರಿಡಿ

ತುಮಕೂರು ವಿಶ್ವವಿದ್ಯಾಲಯಕ್ಕೆ ಹೊಸ ಹೆಸರಿಡುವ ಪ್ರಯತ್ನಗಳು ಮುನ್ನೆಲೆಗೆ ಬಂದಿವೆ. ಯಾವುದೇ, ವಿಶ್ವವಿದ್ಯಾಲಯಕ್ಕೆ ಹೆಸರಿಡಲು ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದವರ ಹೆಸರನ್ನು ಪರಿಗಣಿಸುವುದು ಸೂಕ್ತ. ಈಗಾಗಲೇ, ಶಿವಮೊಗ್ಗದ ವಿ.ವಿ.ಗೆ ಕುವೆಂಪು ಅವರ ಹೆಸರಿಡಲಾಗಿದೆ. ತುಮಕೂರು ಜಿಲ್ಲೆಯವರೇ ಆದ ತೀ.ನಂ. ಶ್ರೀಕಂಠಯ್ಯ ಅವರು, ಕನ್ನಡ ಭಾಷಾಶಾಸ್ತ್ರಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಆಚಾರ್ಯರು. ‘ತೀನಂಶ್ರೀ’ ಅವರ ‘ಭಾರತೀಯ ಕಾವ್ಯ ಮೀಮಾಂಸೆ’ಯು ಒಂದು ಆಚಾರ್ಯ ಕೃತಿ ಎಂದು ಕುವೆಂಪು ಬಣ್ಣಿಸಿದ್ದರು. ಹಾಗಾಗಿ, ವಿ.ವಿ.ಗೆ ‘ತೀನಂಶ್ರೀ’ ಹೆಸರಿಡುವುದು ಅರ್ಥಪೂರ್ಣ.

⇒ಲಕ್ಷ್ಮೀಕಾಂತರಾಜು ಎಂ.ಜಿ., ಗುಬ್ಬಿ

ಗಣೇಶೋತ್ಸವ: ಪರಿಸರ ಸ್ನೇಹಿಯಾಗಲಿ

ವಿವಿಧ ವಿನ್ಯಾಸ, ಆಕಾರ ಹಾಗೂ ಕಲಾಕಾರರ ಕುಸುರಿಯಿಂದ ಅರಳಿದ ಗಣಪತಿ ಮೂರ್ತಿಗಳನ್ನು ನೋಡುವುದೇ ಆನಂದ. ಆದರೆ, ಆಚರಣೆ ಆಡಂಬರ ಆಗಬಾರದು. ಪರಿಸರಕ್ಕೆ ತೊಂದರೆಯಾಗದಂತೆ ಅಲಂಕಾರ ಮಾಡಬೇಕು. ಹಾಗೆಯೇ ಪರಿಸರ ಸ್ನೇಹಿ ಗಣೇಶನನ್ನು ಪೂಜಿಸಬೇಕು. ಹಬ್ಬದ ದಿನವಿಡೀ ಕಿವಿಗೆ ಹಾನಿಯಾಗುವ ವಾದ್ಯಗೋಷ್ಠಿಗಳ ಅವಶ್ಯಕತೆಯಿಲ್ಲ. ಪಟಾಕಿಯಂತೂ ಹಚ್ಚಲೇಬಾರದು. ಪಿಒಪಿಯಿಂದ (ಪ್ಲಾಸ್ಟರ್ ಆಫ್‌ ಪ್ಯಾರೀಸ್) ತಯಾರಿಸಿದ ಮೂರ್ತಿಗಳನ್ನು ಬಳಸದೆ, ಮಣ್ಣಿನ ಮೂರ್ತಿಗಳನ್ನು ಬಳಸುವ ಮೂಲಕ ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಹೊಣೆ. 

⇒ಭೂಮಿಕಾ ರಂಗಪ್ಪ ದಾಸರಡ್ಡಿ, ಬಿದರಿ

ಹಬ್ಬುತ್ತಿದೆ ಇಲಿ ಜ್ವರ, ಇರಲಿ ಎಚ್ಚರ

ರಾಜ್ಯದ ಹಲವೆಡೆ ಇಲಿ ಜ್ವರ ಹರಡುತ್ತಿರುವುದು ವರದಿಯಾಗಿದೆ. ಮಳೆಯ ನಂತರ ನೀರು ನಿಂತಿರುವ ಸ್ಥಳಗಳು ಮತ್ತು ತುರ್ತು ವೈದ್ಯಕೀಯ ಸೌಲಭ್ಯದ ಕೊರತೆಯಿಂದಾಗಿ ರೋಗದ ತೀವ್ರತೆ ಹೆಚ್ಚುತ್ತಿದೆ. ಈ ರೋಗವು ಮನುಷ್ಯರಿಗೂ ಪ್ರಾಣಿಗಳಿಗೂ ಅಪಾಯಕಾರಿ. ಸರ್ಕಾರ ಮತ್ತು ಆರೋಗ್ಯ ಇಲಾಖೆಯು ತಕ್ಷಣವೇ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಚಿಕಿತ್ಸಾ ಕೇಂದ್ರಗಳ ವ್ಯವಸ್ಥೆ ಮಾಡಬೇಕು ಹಾಗೂ ಲಸಿಕೆಗಳನ್ನು ವಿತರಿಸಬೇಕು.

⇒ವಿಜಯಕುಮಾರ್ ಎಚ್.ಕೆ., ರಾಯಚೂರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.