ADVERTISEMENT

ಶನಿವಾರ, 21–5–1994

​ಪ್ರಜಾವಾಣಿ ವಾರ್ತೆ
Published 20 ಮೇ 2019, 18:30 IST
Last Updated 20 ಮೇ 2019, 18:30 IST

ಭಾರತ–ಅಮೆರಿಕ ಜಂಟಿ ಆಯೋಗ ಪುನಶ್ಚೇತನಕ್ಕೆ ನಿರ್ಧಾರ

ವಾಷಿಂ‌ಗ್ಟನ್, ಮೇ 20 (ಯುಎನ್‌ಐ, ಪಿಟಿಐ)– ಭಾರತ ಮತ್ತು ಅಮೆರಿಕವು ಜಂಟಿ ಆಯೋಗವನ್ನು ಪುನಶ್ಚೇತನಗೊಳಿಸಿ ಪರಸ್ಪರ ಸೈನಿಕ ನಾಗರಿಕ ಮತ್ತು ಸೇವಾ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸಲು ನಿರ್ಧರಿಸಿವೆ.

ಬುಧವಾರ ಪ್ರಧಾನಿ ನರಸಿಂಹರಾವ್ ಅವರು ಅಮೆರಿಕ ಸ್ಟೇಟ್ ಇಲಾಖೆಯ ಉಪಕಾರ್ಯದರ್ಶಿ ಸ್ಟ್ರೋಬ್ ಟಾಲ್ಬೋಟ್ ಅವರೊಡನೆ ನಡೆಸಿದ ಮಾತುಕತೆಯ ಫಲಶ್ರುತಿ ಇದು. ವಿವಿಧ ಹಂತಗಳಲ್ಲಿ ವಿದೇಶಾಂಗ ಸಚಿವಾಲಯ ಮಟ್ಟದ ಮಾತುಕತೆಗಳನ್ನು ನಿಯಮಿತ ಅವಧಿಗಳಲ್ಲಿ ನಡೆಸುವುದು, ತಂತ್ರಜ್ಞಾನ ಕುರಿತು ಒಡಂಬಡಿಕೆಗಳ ಪುನಶ್ಚೇತನಗೊಳಿಸುವ ಮತ್ತು ಮುಂದೊಂದು ದಿನ ಚಿಂತನ ಚಿಲುಮೆಯಾಗಿ ರೂಪುಗೊಳ್ಳಬಲ್ಲ ಗಣ್ಯವ್ಯಕ್ತಿಗಳ ಗುಂಪನ್ನು ರಚಿಸುವ ಸಾಧ್ಯತೆ ಕುರಿತೂ ಉಭಯ ದೇಶಗಳು ಒಪ್ಪಿವೆ.

ADVERTISEMENT

ಜಪಾನ್, ಜರ್ಮನಿ ಮತ್ತು ಫ್ರಾನ್ಸ್ ದೇಶಗಳೊಂದಿಗೆ ಈಗಾಗಲೇ ಭಾರತವು ಪರಸ್ಪರ ಗಣ್ಯರ ತಂಡಗಳನ್ನು ರಚಿಸಿಕೊಂಡಿದೆ.

ಗುರುವಿಗೆ ಅಪ್ಪಳಿಸಲಿರುವ ಧೂಮಕೇತು

ವಾಷಿಂಗ್ಟನ್, ಮೇ 20 (ಎಪಿ)– ಗುರುಗ್ರಹಕ್ಕೆ ಧೂಮಕೇತು ಒಂದರ ತುಣುಕುಗಳು ಅಪ್ಪಳಿಸಲಿರುವ ಅಪೂರ್ವ ಐತಿಹಾಸಿಕ ವಿದ್ಯಮಾನವನ್ನು ವೀಕ್ಷಿಸಲು ವಿಶ್ವದ ವಿವಿಧ ಭಾಗಗಳ ಖಗೋಳ ವಿಜ್ಞಾನಿಗಳು ಸಜ್ಜಾಗುತ್ತಿದ್ದಾರೆ.

ಆಕಾಶದಲ್ಲಿ ಚಲಿಸುತ್ತಿರುವ ಷೂಮೇಕರ್ ಲೆವಿ 9 ಧೂಮಕೇತು ಸುಮಾರು 20 ತುಣುಕುಗಳಾಗಿ ಒಡೆದು ಜುಲೈ 16ರಿಂದ 22ರವರೆಗೆ ಗುರುಗ್ರಹಕ್ಕೆ ಅಪ್ಪಳಿಸಲಿದೆ. ಈ ತುಣುಕುಗಳಲ್ಲಿ ಒಂದು ಸುಮಾರು 4 ಕಿಲೋ ಮೀಟರ್ ಗಾತ್ರದ್ದು.

ಪ್ರಬಲ ಡಿಕ್ಕಿ: ಈ ‘ಡಿಕ್ಕಿ’ ಸುಮಾರು ಹತ್ತು ಲಕ್ಷ ಮೆಗಾ ಟನ್‌ನಷ್ಟು ಪ್ರಬಲ. ಹತ್ತು ಲಕ್ಷ ವರ್ಷಕ್ಕೊಮ್ಮೆ ಸಂಭವಿಸುವ ಈ ವಿದ್ಯಮಾನವನ್ನು ನೋಡಲು ವಿಶ್ವದಾದ್ಯಂತ ಖಗೋಳ ವಿಜ್ಞಾನಿಗಳ ಟೆಲಿಸ್ಕೋಪುಗಳು ಗುರುಗ್ರಹದತ್ತ ತಿರುಗಲಿವೆ.

ಮೆಷಿನ್ ಗನ್‌ನಿಂದ ಸಿಡಿಯುವ ಗುಂಡುಗಳಂತೆ ಧೂಮಕೇತು ತುಂಡುಗಳು ಗುರುಗ್ರಹದ ಮೇಲೆ ಧಡಧಡನೆ ಬೀಳಲಿವೆ.

‘ಇಂಥ ವಿದ್ಯಮಾನವು ಸಂಭವಿಸಬಹುದೆಂಬ ಮುನ್ಸೂಚನೆ ಸಿಕ್ಕಿರುವುದು ಇದೇ ಮೊದಲ ಬಾರಿ. ಇದನ್ನು ವೈಜ್ಞಾನಿಕವಾಗಿ ವೀಕ್ಷಿಸಲು ಸಿದ್ಧರಾಗುತ್ತಿದ್ದೇವೆ’ ಎಂದು ಈ ಧೂಮಕೇತುವನ್ನು ಮೊದಲ ಬಾರಿಗೆ ಗುರುತಿಸಿದ ವಿಜ್ಞಾನಿ ಜೀನ್ ಷೂಮೇಕರ್ ಅವರು ಹೇಳುತ್ತಾರೆ.

ಹಿರಿಯ ಕಾಂಗೈ ಮುಖಂಡ ಬ್ರಹ್ಮಾನಂದ ರೆಡ್ಡಿ ನಿಧನ

ಹೈದರಾಬಾದ್, ಮೇ 20 (ಪಿಟಿಐ)– ಇಲ್ಲಿನ ನಿಜಾಮ್ಸ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಇಂದು ಸಂಜೆ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಅಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕೆ. ಬ್ರಹ್ಮಾನಂದ ರೆಡ್ಡಿ ನಿಧನರಾದರು.

ರೆಡ್ಡಿಯವರು ಕೇಂದ್ರ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಸಹಾ ಸೇವೆ ಸಲ್ಲಿಸಿದ್ದರು.ಅವರಿಗೆ 82 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ರಾಘವಮ್ಮ ಅವರನ್ನು ಆಗಲಿದ್ದಾರೆ.ರೆಡ್ಡಿಯವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಾಳೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.