ADVERTISEMENT

ಮಂಗಳವಾರ, 6–12–1994

ಮಂಗಳವಾರ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 17:20 IST
Last Updated 5 ಡಿಸೆಂಬರ್ 2019, 17:20 IST

ಲೋಕಸಭೆಗೆ ವಿ.ಪಿ. ಸಿಂಗ್ ರಾಜೀನಾಮೆ

ನವದೆಹಲಿ, ಡಿ. 5 (ಪಿಟಿಐ) ಜನತಾ ದಳದ ನಾಯಕ ವಿಶ್ವನಾಥ ಪ್ರತಾಪ್‌ ಸಿಂಗ್ ಅವರು ಇಂದು ಲೋಕಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.

ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ‘ರಾಷ್ಟ್ರೀಯ ರಂಗ– ಎಡರಂಗ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುವ ಹಂತದಲ್ಲಿರುವ ಕಾರಣ’ ನಿರಾಳವಾಗಿ ರಾಜೀನಾಮೆ
ನೀಡುತ್ತಿರುವುದಾಗಿ ಅವರು ತಿಳಿಸಿದರು.

ADVERTISEMENT

***

ವೀರಪ್ಪನ್ ಷರತ್ತಿಗೆ ಪೊಲೀಸರ ಅಸ್ತು

ಕೊಯಮತ್ತೂರು, ಡಿ. 5 (ಪಿಟಿಐ)– ನರಹಂತಕ ವೀರಪ್ಪನ್‌ನನ್ನು ಬಂಧಿಸಲು ನಿಯೋಜಿಸಲಾಗಿರುವ ವಿಶೇಷ ಕಾರ್ಯಾಚರಣೆ ಪಡೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಕ್ಷಣವೇ ತಮ್ಮ ಚಟುವಟಿಕೆಗಳನ್ನು ನಿಲ್ಲಿಸುವಂತೆ ತಿಳಿಸಲಾಗಿದೆ. ಈ ದಂತಚೋರನ ತಂಡದವರಿಂದ ಅಪಹರಣಕ್ಕೊಳಗಾಗಿರುವ ಡಿಎಸ್‌ಪಿ ಹಾಗೂ ಅವರ ಸಂಬಂಧಿಗಳ ಪ್ರಾಣರಕ್ಷಣೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ತಮಿಳುನಾಡಿನ ಜಾಗೃತಿ ಮತ್ತು ಭ್ರಷ್ಟಾಚಾರ ವಿರೋಧಿ ದಳದ ಡಿಎಸ್‌ಪಿ ಚಿದಂಬರನಾಥ್ ಹಾಗೂ ಅವರ ಇಬ್ಬರು ಸಂಬಂಧಿಗಳನ್ನು ವೀರಪ್ಪನ್ ತಂಡ ಶನಿವಾರ ಕೊಯಮತ್ತೂರು ಜಿಲ್ಲೆಯ ಸಿರಿಮುಗೈನಿಂದ ಅಪಹರಿಸಿದೆ.

ಅಪಹೃತರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಅಧಿಕಾರಿಗಳು ತಮ್ಮ ಚಟುವಟಿಕೆಗಳನ್ನು ನಿಲ್ಲಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ
ಸಿ.ವಿ. ಶಂಕರ್ ಸುದ್ದಿಗಾರರಿಗೆ ತಿಳಿಸಿದರು.

***

ಕಲ್ಲಿನಿಂದ ಜಜ್ಜಿ ನ್ಯಾಯಾಧೀಶರ ಹತ್ಯೆ

ಪಟ್ನಾ, ಡಿ. 5 (ಯುಎನ್‌ಐ)– ಮುಜಾಫರ್ ನಗರದ ಖಾಬ್ರಾ ಎಂಬಲ್ಲಿ ರೊಚ್ಚಿಗೆದ್ದ ಗುಂಪೊಂದು ಗೋಪಾಲ್‌ಗಂಜ್ ನ್ಯಾಯಾಧೀಶ ಜಿ. ಕೃಷ್ಣಯ್ಯ ಅವರನ್ನು ಇಂದು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿತು ಹಾಗೂ ಅವರ ಕಾರನ್ನು ಜಖಂಗೊಳಿಸಿತು.

ಬಿಹಾರ ಪೀಪಲ್ಸ್ ಪಕ್ಷದ ಕಾರ್ಯಕರ್ತರು ನಿನ್ನೆ ಮುಜಾಫರ್‌ ನಗರದಲ್ಲಿ ಹತ್ಯೆಗೊಳಗಾದ ಪಕ್ಷದ ಐವರು ಕಾರ್ಯಕರ್ತರ ಶವಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಿದ್ದಾಗ ಕೃಷ್ಣಯ್ಯ ಅವರ ಕಾರು ಆ ಮಾರ್ಗವಾಗಿ ಬಂತು. ಮೆರವಣಿಗೆ ನೇತೃತ್ವವನ್ನು ಪಕ್ಷದ ಸ್ಥಾಪಕ ಹಾಗೂ ಶಾಸಕ ಆನಂದ ಮೋಹನ್ ಹಾಗೂ ಅವರ ಪತ್ನಿ ಲವ್ಲಿ ಆನಂದ್ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.