ADVERTISEMENT

ಗುರುವಾರ 20–1–1994

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 20:00 IST
Last Updated 19 ಜನವರಿ 2019, 20:00 IST

12 ಅಂಶ ಸೂತ್ರ ಅಂತಿಮ

ನವದೆಹಲಿ.ಜ.19– ಕರ್ನಾಟಕ ಕಾಂಗೈ ಬಿಕ್ಕಟ್ಟಿಗೆ ವರಿಷ್ಠ ಮಂಡಲಿ ನಿನ್ನೆ ಸೂಚಿಸಿದ 12 ಅಂಶಗಳ ಪರಿಹಾರ ಸೂತ್ರವೇ ಅಂತಿಮ: ಅದರಲ್ಲಿ ಮಾರ್ಪಾಡಾಗಲಿ ಬದಲಾವಣೆಯಾಗಲಿ ಇಲ್ಲವೇ ಇಲ್ಲ ಎಂದು ಕಾಂಗೈ ವಕ್ತಾರ ವಿ.ಎನ್‌.ಗಾಡ್ಗೀಳ್‌ ಇಂದು ಇಲ್ಲಿ ಸ್ವಷ್ಟಪಡಿಸಿದರು.‌

ಕೆಲವರನ್ನು ಬಿಟ್ಟರೆ ಬಹುತೇಕವಾಗಿ ಎಲ್ಲರೂ ಈ ಪರಿಹಾರ ಸೂತ್ರವನ್ನು ಒಪ್ಪಿಕೊಂಡಿದ್ದಾರೆ ಎಂದ ಅವರು ಈ ಸೂತ್ರವನ್ನು ಉಲ್ಲಂಘಿಸುವವರ ವಿರುದ್ಧ ಕೈಗೊಳ್ಳಬಹುದಾದ ಕ್ರಮವು ಅವರು ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುದನ್ನು ಅವಲಂಬಿಸಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಗಾಡ್ಗೀಳ್‌ ತಮ್ಮ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು.

ADVERTISEMENT

ಮೊಯಿಲಿ–ಮೂರ್ತಿ ಭೇಟಿ; ಇಂದು ಜತೆಯಲ್ಲಿ ದೆಹಲಿಗೆ

ಬೆಂಗಳೂರು.ಜ.19– ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅವರೇ ಖುದ್ದಾಗಿ ಮಾಜಿ ಕಂದಾಯ ಸಚಿವ ಎಂ.ರಾಜಶೇಖರ ಮೂರ್ತಿ ಅವರ ನಿವಾಸಕ್ಕೆ ಇಂದು ರಾತ್ರಿ ತೆರಳಿ ಹೈಕಮಾಂಡ್‌ ಸೂತ್ರಗಳಿಗೆ ಒಪ್ಪಿಕೊಳ್ಳುವಂತೆ ಮನವಿ ಮಾಡಿರುವುದು ಹಾಗೂ ನಾಳೆ ಇಬ್ಬರು ದೆಹಲಿಗೆ ಹೋಗಲಿರುವುದು ರಾಜ್ಯ ಕಾಂಗೈ ಬಿಕ್ಕಟ್ಟು ಶಮಗೊಳ್ಳುತ್ತಿರುವ ಸೂಚನೆಯನ್ನು ನೀಡಿದೆ.

ಮೂರ್ತಿ ಅವರ ಜತೆಗಿನ ಭೇಟಿಯ ನಂತರ ಮೊಯಿಲಿ ಅವರು ನೇರವಾಗಿ ಆಸ್ಪ‍ತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವ ಉಪಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಜತೆಗೂ ಸುಮಾರು 45 ನಿಮಿಷ ಮಾತುಕತೆ ನಡೆಸಿದರು.

ಪಕ್ಷ ಹಾಗೂ ತಮ್ಮೆಲ್ಲರ ಹಿತದೃಷ್ಟಿಯಿಂದ ಹೈಕಮಾಂಡ್‌ ಜತೆ ಚರ್ಚಿಸಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮೂರ್ತಿ ಅವರಿಗೆ ಭಿನ್ನರು ಸಂಪೂರ್ಣ ಅಧಿಕಾರ ನೀಡಿದ್ದಾರೆ.

ಹೊಸ ರೈಲ್ವೆ ವಲಯ ಕೇಂದ್ರ: ಹುಬ್ಬಳ್ಳಿ ಬೇಡಿಕೆ

ಹುಬ್ಬಳ್ಳಿ.ಜ.19–ನೈಋತ್ಯ ರೈಲ್ವೆ ವಲಯವನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಬೇಕು ಹಾಗೂ ಹುಬ್ಬಳ್ಳಿ – ಕಾರವಾರ ರೈಲು ಮಾರ್ಗವನ್ನು ಎಂಟನೇ ಯೋಜನೆಯಲ್ಲಿ ಸೇರಿಸಬೇಕೆನ್ನುವ ಬೇಡಿಕೆಗಳನ್ನು ಒತ್ತಾಯಪಡಿಸಲು ಶುಕ್ರವಾರ(ಜನವರಿ 21) ರಂದು ಹುಬ್ಬಳ್ಳಿ ರೈಲ್ವೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರದೇಶಗಳಲ್ಲಿ ಸಾರ್ವತ್ರಿಕ ಬಂದ್ ಆಚರಿಸುವಂತೆ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಪಾಟೀಲ್‌ ಪುಟ್ಟಪ್ಪ ಕರೆ ನೀಡಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಬಂದ್‌ ಕಾಲದಲ್ಲಿ ಮುಂಜಾನೆ 6 ರಿಂದ ಸಂಜೆ 5ರವರೆಗೆ ರೈಲು ಹಾಗೂ ರಸ್ತೆ ತಡೆಗಟ್ಟಲಾಗುವುದೆಂದು ವರ್ತಕರ ಹೋಟೆಲ್‌ ಉದ್ಯಮಿಗಳ ಕಾರ್ಮಿಕ ಸಂಘಟನೆಗಳು, ವಿದ್ಯಾರ್ಥಿಗಳು ಮತ್ತಿತರೆಲ್ಲರೂ ಸಹಕರಿಸಬೇಕೆಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.