ADVERTISEMENT

25 ವರ್ಷಗಳ ಹಿಂದೆ: ಮಂಗಳವಾರ, 3–12–1996

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 19:30 IST
Last Updated 2 ಡಿಸೆಂಬರ್ 2021, 19:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ತಾಂತ್ರಿಕ ಕಾರಣ: ಸಚಿವ ಶಾಣಪ್ಪ ರಾಜೀನಾಮೆ

ಬೆಂಗಳೂರು, ಡಿ. 2– ವಿಧಾನ ಪರಿಷತ್ತಿಗೆ ನಾಮಕರಣ ಹೊಂದುವಲ್ಲಿನ ವಿಳಂಬ ಹಾಗೂ ತಾಂತ್ರಿಕ ತೊಡಕುಗಳಿಂದಾಗಿ ಅಬಕಾರಿ ಸಚಿವ ಕೆ.ಬಿ. ಶಾಣಪ್ಪ ಅವರು ಸ್ವಯಂಪ್ರೇರಣೆಯಿಂದ ಇಂದು ಇಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರಾದರೂ ಅವರೂ ಸೇರಿದಂತೆ ಒಟ್ಟು ಮೂವರನ್ನು ಮೇಲ್ಮನೆಗೆ ನಾಮಕರಣ ಸದಸ್ಯರನ್ನಾಗಿ ನೇಮಿಸಲು ಸಚಿವ ಸಂಪುಟ ಇಂದು ಒಪ್ಪಿಗೆಯನ್ನು ನೀಡಿತು.

6 ತಿಂಗಳ ಅವಧಿ ಪೂರೈಸಲಿರುವ ಕೆ.ಬಿ. ಶಾಣಪ್ಪ ಅವರು ಅಧಿಕಾರದಲ್ಲಿ ಮುಂದುವರಿಯಲು ವಿಧಾನ ಪರಿಷತ್ತಿಗೆ ಆಯ್ಕೆ ಅನಿವಾರ್ಯ ಆಗಿದ್ದರ ಹಿನ್ನೆಲೆಯಲ್ಲಿ ಅವರ ಹೆಸರಿನೊಂದಿಗೆ ಮಂಡ್ಯ ಜಿಲ್ಲಾ ಜನತಾದಳದ ಅಧ್ಯಕ್ಷ ಸಿದ್ದರಾಜು ಹಾಗೂ ಕಲ್ಬುರ್ಗಿಯ ಡೇವಿಡ್‌ ಸಿಮೆಯೋನ್‌ ಅವರನ್ನು ನಾಮಕರಣ ಸದಸ್ಯರನ್ನಾಗಿ ನೇಮಿಸಲು ಸಂಪುಟದ ತೀರ್ಮಾನವನ್ನು ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಅವರು ರಾಜ್ಯಪಾಲರಿಗೆ ಇಂದು ಕಳುಹಿಸಿದರು.

ADVERTISEMENT

ಸಚಿವ ಶಾಣಪ್ಪ ಅವರ ಅನಿರೀಕ್ಷಿತ ರಾಜೀನಾಮೆ ಪಕ್ಷದಲ್ಲಿ ಸ್ವಲ್ಪ ಮಟ್ಟಿಗೆ ಗೊಂದಲ ಸೃಷ್ಟಿಸಿತಾದರೂ, ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಅವರಿಗೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಕ್ತ ಅವಕಾಶ ಮಾಡಿಕೊಟ್ಟಿತು. ಶಾಣಪ್ಪ ಅವರು ನಾಮಕರಣ ಸದಸ್ಯರಾಗಿ ಪುನಃ ಅಧಿಕಾರ ವಹಿಸಿಕೊಳ್ಳುವವರೆಗೆ ಮುಖ್ಯಮಂತ್ರಿ ಅವರು ಅಬಕಾರಿ ಖಾತೆಯನ್ನು ತಾವೇ ವಹಿಸಿಕೊಳ್ಳುವರು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.