ADVERTISEMENT

25 ವರ್ಷಗಳ ಹಿಂದೆ| ಶನಿವಾರ 28.12.1996

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 19:30 IST
Last Updated 27 ಡಿಸೆಂಬರ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮುಷ್ಕರ ನಿಲ್ಲದೆ ಪೌರಸೇವಾ ನೌಕರರ ಜತೆ ಚರ್ಚೆ ಇಲ್ಲ

ಬೆಂಗಳೂರು. ಡಿ. 27– ರಾಜ್ಯದಾದ್ಯಂತ ನಿನ್ನೆಯಿಂದ ಪೌರಸೇವಾ ನೌಕರರು ನಡೆಸುತ್ತಿರುವ ಮುಷ್ಕರ ಹಿಂತೆಗೆದುಕೊಳ್ಳದ ಹೊರತು ಬೇಡಿಕೆಗಳ ಬಗೆಗೆ ಮಾತುಕತೆ ನಡೆಸಲು ಸಿದ್ಧವಿಲ್ಲ ಎಂದು ಸರ್ಕಾರ ದೃಢ ನಿರ್ಧಾರ ತೆಗೆದುಕೊಂಡಿದೆ.

ಮುಷ್ಕರದಿಂದ ನೀರು ಪೂರೈಕೆ, ನಗರ ನೈರ್ಮಲ್ಯ ಮತ್ತಿತರ ಸೌಲಭ್ಯಗಳಿಗೆ ಅಡಚಣೆ ಆಗದಂತೆ ಪರ್ಯಾಯ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ADVERTISEMENT

ಅಂತರರಾಷ್ಟ್ರೀಯ ಚಿತ್ರೋತ್ಸವದಿಂದ ಹೊರಗುಳಿಯಲು ರಾಜ್ ನಿರ್ಧಾರ

ಬೆಂಗಳೂರು. ಡಿ. 27– ಕೇರಳದ ರಾಜಧಾನಿ ತಿರುವನಂತಪುರದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತಾವು ಪಾಲ್ಗೊಳ್ಳುವುದಿಲ್ಲ ಎಂದು ಕನ್ನಡದ ಮೇರು ನಟ, ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ.ರಾಜ್‌ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ಅವರು ‘ಚಲನಚಿತ್ರೋತ್ಸವದ ಉದ್ಘಾಟನೆಗೆ ನೀವು ಆಹ್ವಾನಿಸಿದಾಗ ನಾನು ಸಮ್ಮತಿಸಿದ್ದು ಸರಿಯಷ್ಟೆ. ಈಗ ಈ ಬಗ್ಗೆ ವಿವಾದಗಳು ಏಳುತ್ತಿರುವುದು ಪತ್ರಿಕೆಗಳಿಂದ ನನ್ನ ಗಮನಕ್ಕೆ ಬಂದಿದೆ. ಹಿರಿಯರ ಆಶೀರ್ವಾದ ದಿಂದ ಗೌರವ, ಮರ್ಯಾದೆಗಳು ನನ್ನನ್ನು ಹುಡುಕಿಕೊಂಡು ಬಂದಿವೆಯೇ ಹೊರತು, ಅವುಗಳನ್ನು ನಾನು ಹಿಂಬಾಲಿಸಿಲ್ಲ. ಈ ವಿಚಾರದಲ್ಲಿ ನಾನು ತೃಪ್ತ. ನಾನು ಸದಾ ವಿವಾ ದಾತೀತ ವ್ಯಕ್ತಿಯಾಗಿರಬೇಕು ಎನ್ನುವುದು ಸರ್ವವಿದಿತ’ ಎಂದು ರಾಜ್ ಹೇಳಿದ್ದಾರೆ.

ಪೊಲೀಸರನ್ನು ಕೂಡಿ ಹಾಕಿ ಗಂಧ ಲೂಟಿ

ಕೆಜಿಎಫ್, ಡಿ. 27– ಶ್ರೀಗಂಧ ಕಳ್ಳ ಸಾಗಣೆದಾರರ ಗುಂಪೊಂದು ಇಂದು ಮುಂಜಾನೆ ಕಾಮಸಮುದ್ರ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಗಂಧದ ಮರ ಅಪಹರಿಸಿದ ಘಟನೆ ವರದಿಯಾಗಿದೆ.

ಇಂದು ಬೆಳಗಿನ ಜಾವ 2.05ಕ್ಕೆ 5–6 ಜನರ ಗಂಪೊಂದು ಠಾಣೆಗೆ ಬಂದು ದೂರು ನೀಡಬೇಕೆಂದು ಅಲ್ಲಿನ ಸೆಂಟ್ರಿ ಶಿವಣ್ಣ ಅವರನ್ನು ಕೇಳಿದರು. ದೂರಿನ ಬಗ್ಗೆ ವಿಚಾರಿಸುವುದರಲ್ಲಿ ಆತನನ್ನು ಗುಂಪು ರೈಫಲ್ ಸಮೇತ ಠಾಣೆಯ ಹಾಲಿಗೆ ತಳ್ಳಿ ಬಾಗಿಲು ಹಾಕಿತು. ಆಗ ಠಾಣೆಯೊಳಗೆ ಎಎಸ್‌ಜಿ ರಂಗನಾಥ್, ಒಬ್ಬ ಹೆಡ್ ಕಾನ್‌ಸ್ಟೆಬಲ್ ಹಾಗೂ ಮೂವರು ಕಾನ್‌ಸ್ಟೆಬಲ್‌ಗಳು ನಿದ್ರಿಸುತ್ತಿದ್ದರು. ಬಾಗಿಲು ಹಾಕಿದ ತಕ್ಷಣ ಸ್ವಲ್ಪದೂರ ಕತ್ತಲಲ್ಲಿ ನಿಂತಿದ್ದ ಟೆಂಪೊ, ಠಾಣೆ ಮುಂದೆ ಬಂದು, ಅದರಲ್ಲಿದ್ದ 10 ಜನ ಬ್ಯಾಟರಿಚಾಲಿತ ಗರಗಸದಿಂದ ಠಾಣೆ ಆವರಣದಲ್ಲಿ ಬೆಳೆದಿದ್ದ ಸುಮಾರ 30 ವರ್ಷದ ಗಂಧದ ಮರವನ್ನು ಐದೇ ನಿಮಿಷದಲ್ಲಿ ಕತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.