ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ: ಭಾನುವಾರ 9.4.1972

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 19:30 IST
Last Updated 8 ಏಪ್ರಿಲ್ 2022, 19:30 IST
   

ಅತ್ಯಧಿಕ ಬಹುಮತ: ರಾಜ್ಯಸಭೆಗೆ ವಿರೇಂದ್ರ ಪಾಟೀಲ್

ಬೆಂಗಳೂರು, ಏ. 8– ಇಂದು ಇಲ್ಲಿ ರಾಜ್ಯಸಭೆ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಅತ್ಯಂತ ಹೆಚ್ಚು ಮತಗಳನ್ನು ಗಳಿಸಿ ಸಂಸ್ಥಾ ಕಾಂಗ್ರೆಸ್ ಭಾರಿ ಜಯಪಡೆಯಿತು.

ಆಯ್ಕೆಯಾದ ಉಳಿದ ಆಡಳಿತ ಕಾಂಗ್ರೆಸ್ ಅಭ್ಯರ್ಥಿಗಳಿವರು.

ADVERTISEMENT

1. ಮಾಜಿ ಉಪಸಚಿವ ಶ್ರೀ ಮಕ್ಸೂದ್ ಅಲೀಖಾನ್ 2. ಜೀವವಿಮೆ ಕಾರ್ಪೊರೇಷನ್ನಿನ ಮಾಜಿ ಅಧ್ಯಕ್ಷ ಶ್ರೀ ಟಿ.ಎ. ಪೈ. 3. ಹಿರಿಯ ವಕೀಲರಾದ ಶ್ರೀ ಎಚ್‌.ಎಸ್. ನರಸಯ್ಯ.

ಆಡಳಿತ ಕಾಂಗ್ರೆಸ್ಸಿನ ನಾಲ್ಕನೇ ಅಭ್ಯರ್ಥಿ ರಾಜ್ಯಸಭೆಯ ನಿವೃತ್ತರಾಗಲಿರುವ ಸದಸ್ಯ ಶ್ರೀ ಎಂ.ಡಿ. ನಾರಾಯಣ್ ಅವರು ಸೋತರು.

ವಿಧಾನಸಭೆಯ 216 ಸದಸ್ಯರೆಲ್ಲ ಮತದಾನ ಮಾಡಿದರು.

ಆಡಳಿತ ಪಕ್ಷದಿಂದ ಕನಿಷ್ಠ 8 ಜನರ ಮತಾಂತರ?

ಬೆಂಗಳೂರು, ಏ. 8– ಇಂದು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಪ್ರತಿಷ್ಠಿತ ಚುನಾವಣೆಯಲ್ಲಿ ಆಡಳಿತ ಕಾಂಗ್ರೆಸ್ ಪಕ್ಷದಲ್ಲಿ ಕನಿಷ್ಠ 8 ಮತಗಳು ಪಕ್ಷಾಂತರಗೊಂಡವೆಂದು ರಾಜಕೀಯ ವಲಯಗಳಲ್ಲಿ ಅಂದಾಜು ಮಾಡಲಾಗಿದೆ.

ಈ ರೀತಿ ಮತಗಳ ಪಕ್ಷಾಂತರ ನಡೆಯದಿದ್ದಲ್ಲಿ ಸಂಸ್ಥಾ ಕಾಂಗ್ರೆಸ್ಸಿನ ಶ್ರೀ ವೀರೇಂದ್ರ ಪಾಟೀಲರ ವಿಜಯ ಕಷ್ಟವಾಗುತ್ತಿತ್ತು ಎಂಬುದು ಸ್ಪಷ್ಟವಾಗಿದೆ.

1973ರ ಅಂತ್ಯದೊಳಗೆ ನಗರಕ್ಕೆ ಕಾವೇರಿ ನೀರು

ಬೆಂಗಳೂರು, ಏ. 8– ನಗರಕ್ಕೆ ಕುಡಿಯುವ ನೀರನ್ನು ಪೂರೈಸುವ ಕಾವೇರಿ ನೀರು ಯೋಜನೆಯನ್ನು 1973ರ ಡಿಸೆಂಬರ್‌ನೊಳಗೆ ಪೂರ್ಣಗೊಳಿಸಲು ಎಲ್ಲ ರೀತಿಯಿಂದ ಪ್ರಯತ್ನಿಸುವುದಾಗಿ ಪೌರಾಡಳಿತ ಸಚಿವ ಶ್ರೀ ಬಿ. ಬಸವಲಿಂಗಪ್ಪ ಅವರು ಇಂದು ವಿಧಾನಸಭೆಯಲ್ಲಿ ಭರವಸೆ ನೀಡಿದರು.

‘ಯೋಜನೆಯನ್ನು ತ್ವರಿತವಾಗಿ ಕಾರ್ಯಗತಗೊಳಿಸಬೇಕೆಂಬ ಕಾತರ ನಿಮ್ಮೆಲ್ಲರಂತೆ ನನಗೂ ಇದೆ’ ಎಂದು ತಿಳಿಸಿದ ಅವರು, ‘ನಿಗದಿಯಾದ ಅವಧಿಯಲ್ಲೇ ಯೋಜನೆಯನ್ನು ಪೂರ್ಣಗೊಳಿಸಲಾಗುವುದು’ ಎಂದರು.

ಕಾವೇರಿ ಯೋಜನೆಯನ್ನು ಪೂರ್ತಿಗೊಳಿಸಲು ತ್ವರಿತ ಕ್ರಮ ಕೈಗೊಳ್ಳಬೇಕೆಂಬ ಶ್ರೀ ಟಿ.ಆರ್. ಶಾಮಣ್ಣ ಅವರ ಖಾಸಗಿ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಸಚಿವರು, ಯೋಜನೆಯಲ್ಲಿ ಬಳಸಲಾಗುವ ನೀರ್ಗೊಳವೆಗಳ ಬಗ್ಗೆ ಉಂಟಾದ
ವಾದ, ವಿವಾದ ಮತ್ತಿತರ ಕಾರಣಗಳಿಂದ ಯೋಜನೆ ಆರಂಭಕ್ಕೆ ವಿಳಂಬವಾಯಿತೆಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.