ADVERTISEMENT

25 ವರ್ಷಗಳ ಹಿಂದೆ | ಟಿ.ವಿ ಹಗರಣ: ಜಯಾ ಮುಕ್ತಿ

​ಪ್ರಜಾವಾಣಿ ವಾರ್ತೆ
Published 31 ಮೇ 2025, 0:21 IST
Last Updated 31 ಮೇ 2025, 0:21 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಟಿ.ವಿ ಹಗರಣ: ಜಯಾ ಮುಕ್ತಿ

ಚೆನ್ನೈ, ಮೇ 30 (ಪಿಟಿಐ) – 1995ರ ‘ಬಣ್ಣದ ಟಿ.ವಿ ಹಗರಣ’ದಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಅಣ್ಣಾಡಿಎಂಕೆ ನಾಯಕಿ ಜಯಲಲಿತಾ ಅವರನ್ನು ಇಂದು ವಿಶೇಷ ನ್ಯಾಯಾಲಯ ಆರೋಪಮುಕ್ತ ಗೊಳಿಸಿ ಬಿಡುಗಡೆ ಮಾಡಿದೆ.

ಆದರೆ ಈಗ ಸಂಸತ್‌ ಸದಸ್ಯರಾಗಿರುವ ಜಯಲಲಿತಾರ ಮಾಜಿ ಸಚಿವ ಸಹೋದ್ಯೋಗಿ ಟಿ.ಎಂ. ಸೆಲ್ವಗಣಪತಿ ಮತ್ತು ಮೂವರು ಐಎಎಸ್‌ ಅಧಿಕಾರಿಗಳು ಸೇರಿದಂತೆ ಆರು ಮಂದಿಯನ್ನು ಕಠಿಣ ಶಿಕ್ಷೆಗೆ ಒಳಪಡಿಸಲಾಗಿದೆ.

ಸೆಲ್ವಗಣಪತಿ, ತಮಿಳುನಾಡು ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಎನ್‌.ಹರಿಭಾಸ್ಕರ್ ಮತ್ತಿತರ ಐವರನ್ನು ವೆಲ್ಲೂರು ಜೈಲಿಗೆ ಕಳುಹಿಸಲಾಯಿತು.

ADVERTISEMENT

ಜಯಲಲಿತಾ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಗ್ರಾಮ ಪಂಚಾಯಿತಿಗಳಿಗೆ 45 ಸಾವಿರ ಟಿ.ವಿ ಸೆಟ್ಟುಗಳ ಖರೀದಿಗೆ ಸಂಬಂಧಿಸಿದಂತೆ ಜಯಲಲಿತಾ ಹಾಗೂ ಅವರ ನಂಬಿಕಸ್ಥ ಸಹಾಯಕಿ ಶಶಿಕಲಾ ನಟರಾಜನ್‌ ಅವರ ಪಾತ್ರ ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದ್ದು, ಈ ಪ್ರಕರಣದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವುದನ್ನು ಮಾತ್ರ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ.

ಮೋಸದಾಟ: ಪೊಲೀಸರಿಂದ ‘ಮಾಯ’ವಾದ ಧ್ವನಿಮುದ್ರಿಕೆ

ನವದೆಹಲಿ, ಮೇ 30 – ಕ್ರಿಕೆಟ್‌ ಆಟಗಾರರು ಮತ್ತು ಬುಕ್ಕಿಗಳ ನಡುವೆ ನಡೆದಿದ್ದ ಟೆಲಿಫೋನ್‌ ಸಂಭಾಷಣೆಯನ್ನು ಒಳಗೊಂಡಿದ್ದ ಧ್ವನಿಮುದ್ರಿಕೆ ‘ಕಳೆದುಹೋಗಿರುವುದು’ ಇನ್ನಿಲ್ಲದ ಊಹಾಪೋಹಗಳಿಗೆ ಎಡೆಕೊಟ್ಟಿದೆ.

1997ರ ಟೈಟಾನ್‌ ಕಪ್ ಕ್ರಿಕೆಟ್‌ ಟೂರ್ನಿಯ ಸಂದರ್ಭದಲ್ಲಿ ಈ ‘ಸಂಭಾಷಣೆ’ಯನ್ನು ಪೊಲೀಸರು ಧ್ವನಿ ಮುದ್ರಿಸಿಕೊಂಡು ತಮ್ಮಲ್ಲಿರಿಸಿಕೊಂಡಿದ್ದರು ಎಂದು ಮುಂಬೈನ ಉನ್ನತ ಪೊಲೀಸ್‌ ಅಧಿಕಾರಿ ಹೇಳಿದ್ದ ಹಿನ್ನೆಲೆಯಲ್ಲಿ, ಸಿಬಿಐ ಆ ಧ್ವನಿಮುದ್ರಿಕೆ ಬೇಕೆಂದು ಮುಂಬೈ ಪೊಲೀಸರಲ್ಲಿ ಮನವಿ ಮಾಡಿಕೊಂಡಿತ್ತು. ಇದಕ್ಕೆ ಮುಂಬೈ ಪೊಲೀಸರು ‘ನಮ್ಮಲ್ಲಿ ಅಂತಹ ಧ್ವನಿಮುದ್ರಿಕೆ ಇಲ್ಲ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.