ADVERTISEMENT

25 ವರ್ಷಗಳ ಹಿಂದೆ: ಸೋಮವಾರ 3–3–1997

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2022, 22:30 IST
Last Updated 2 ಮಾರ್ಚ್ 2022, 22:30 IST
   

ಅಕ್ರಮ ಸಂಪತ್ತು ಗಳಿಕೆ ಆರೋಪ: ತನಿಖೆಗೆ ಸಿದ್ಧ– ದೇವೇಗೌಡ

ಹೊಳೆನರಸೀಪುರ, ಮಾ. 2– ತಮ್ಮ ಕುಟುಂಬದ ಸದಸ್ಯರ ವಿರುದ್ಧ ಮಾಡಲಾದ ಅಕ್ರಮ ಸಂಪಾದನೆ ಆರೋಪಗಳ ಸಂಬಂಧ ಯಾವುದೇ ತನಿಖೆಗೂ ತಾವು ಸಿದ್ಧ ಎಂದು ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.

ಹೇಮಾವತಿ ನದಿ ತೀರದ ಪಟ್ಟಣವಾದ ಇಲ್ಲಿ ಇಂದು, ಹೊಸದಾಗಿ ಪರಿವರ್ತಿಸಲಾದ ಹಾಸನ– ಹೊಳೆನರಸೀಪುರ ಬ್ರಾಡ್‌ಗೇಜ್ ರೈಲು ಮಾರ್ಗದ ಉದ್ಘಾಟನೆ, ಹೊಸ ರೈಲು ಮಾರ್ಗದ ಉದ್ಘಾಟನೆ, ಹೊಸ ರೈಲು ನಿಲ್ದಾಣಕ್ಕೆ ಶಂಕುಸ್ಥಾಪನೆ ಹಾಗೂ ಇನ್ನೂ ಹಲವಾರು ಕಾರ್ಯಕ್ರಮಗಳ ಪ್ರಾರಂಭೋತ್ಸವ ಹಾಗೂ ಶಿಲಾನ್ಯಾಸ ನೆರವೇರಿಸಿ ಪ್ರಧಾನಿ ಮಾತನಾಡಿದರು.

ADVERTISEMENT

‘ನನಗೆ ಒಂದು ಸಾವಿರ ಕೋಟಿ ಆಸ್ತಿ ಇದೆ ಎಂದು ಕೆಲವರು ಹುಡುಕುತ್ತಾ ಇದ್ದಾರೆ. ಯಾರದ್ದು ಎಷ್ಟು ಇದೆ ಎಂದು ನಾನು ಬೇಕಾದರೆ ಒಂದೇ ದಿನದಲ್ಲಿ ಹೊರ ತೆಗೆಯಬಲ್ಲೆ’ ಎಂದು ಅವರು ಹೇಳಿದರು.

ಲೋಕಪಾಲರ ನೇಮಕ ಅಧಿಕಾರ ಪ್ರಧಾನಿಗೆ ಬೇಡ

ನವದೆಹಲಿ, ಮಾ. 2– ‘ಉನ್ನತ ಸ್ಥಾನದಲ್ಲಿರುವವರ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವ ಲೋಕಪಾಲರ ನೇಮಕ ಮಾಡುವ ಅಧಿಕಾರವನ್ನು ಆಳುವ ಪಕ್ಷದ ಪ್ರಮುಖರಿಗೆ ನೀಡಬಾರದು. ಅದರ ಬದಲಾಗಿ ನ್ಯಾಯಾಂಗ, ಪತ್ರಿಕಾರಂಗ ಹಾಗೂ ಸಾರ್ವಜನಿಕ ಕ್ಷೇತ್ರದ ಪ್ರಮುಖರ ಸಮಿತಿಗೆ ವಹಿಸಿಕೊಡಬೇಕು. ಈ ಸಮಿತಿಯಲ್ಲಿ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರೂ ಇರಬೇಕು’ ಎಂದು ಲೋಕಪಾಲ ಮಸೂದೆಯನ್ನು ಪರಿಶೀಲಿಸುತ್ತಿರುವ ಗೃಹ ಖಾತೆಯ ಸ್ಥಾಯಿ ಸಮಿತಿ ಅಭಿಪ್ರಾಯಪಟ್ಟಿದೆ.

ಸಾರ್ವಜನಿಕ ಪ್ರಮುಖರ ಜತೆ ಚರ್ಚಿಸಿ ಮಸೂದೆಯನ್ನು ಅಂತಿಮಗೊಳಿಸುತ್ತಿರುವ ಸಮಿತಿಯು ವರದಿಯನ್ನು ಏಪ್ರಿಲ್ ಎರಡನೇ ವಾರದೊಳಗೆ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.