ADVERTISEMENT

25 ವರ್ಷಗಳ ಹಿಂದೆ: ಶುಕ್ರವಾರ, ಆಗಸ್ಟ್‌ 25, 1995

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2020, 15:36 IST
Last Updated 24 ಆಗಸ್ಟ್ 2020, 15:36 IST
   

ಕೃಷ್ಣಾ: ಮನವಿ ಬಂದಲ್ಲಿ ಹೊಸ ನ್ಯಾಯಮಂಡಲಿ

ನವದೆಹಲಿ, ಆ. 24– ಕೃಷ್ಣಾ ಜಲ ವಿವಾದ ಕುರಿತ ಬಚಾವತ್‌ ನ್ಯಾಯಮಂಡಲಿಯ ತೀರ್ಪಿನಂತೆ 2 ಸಾವಿರ ಇಸವಿ ಒಳಗೆ ತಮ್ಮ ಪಾಲಿನ ನೀರನ್ನು ಉಪಯೋಗಿಸಿಕೊಳ್ಳಬೇಕು ಎಂಬ ಕಾಲಮಿತಿಯನ್ನು ವಿಸ್ತರಿಸಲು ಸಂಬಂಧಿಸಿದ ಯಾವುದಾದರೂ ರಾಜ್ಯ ಮನವಿ ಸಲ್ಲಿಸಿದರೆ ಮತ್ತೊಂದು ನ್ಯಾಯಮಂಡಲಿ ರಚಿಸುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲಿಸುವುದು ಎಂದು ಜಲಸಂಪನ್ಮೂಲ ಖಾತೆ ರಾಜ್ಯ ಸಚಿವ ಪಿ.ವಿ.ರಂಗಯ್ಯ ನಾಯ್ಡು ಇಂದು ಲೋಕಸಭೆಗೆ ತಿಳಿಸಿದರು.

ರಾವ್‌ ಸರ್ಕಾರದ ವಿರುದ್ಧ ಸೋನಿಯಾ ವಾಗ್ದಾಳಿ

ADVERTISEMENT

ಅಮೇಠಿ, ಆ. 24 (ಯುಎನ್‌ಐ, ಪಿಟಿಐ)– ರಾಜೀವ್ ಗಾಂಧಿ ಹತ್ಯೆ ಪ್ರಕರಣದ ತನಿಖೆ ನಿಧಾನಗೊಳ್ಳುತ್ತಿರುವ ಬಗ್ಗೆ ಸೋನಿಯಾ ಅವರು ಇಂದು ಇಲ್ಲಿ ತೀವ್ರ ಅತೃಪ್ತಿ
ವ್ಯಕ್ತಪಡಿಸುವ ಮೂಲಕ ಪಿ.ವಿ ನರಸಿಂಹರಾವ್‌ ನೇತೃತ್ವದ ಸರ್ಕಾರದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

‘ನನ್ನ ಪತಿ ದೇಶಕ್ಕೋಸ್ಕರ ಜೀವಕೊಟ್ಟರು. ಅವರ ಹತ್ಯೆಯಾಗಿ ನಾಲ್ಕೂಕಾಲು ವರ್ಷ ಕಳೆದರೂ ತನಿಖೆ ಪುರ್ಣಗೊಂಡಿಲ್ಲ. ನನ್ನ ಈ ದುಗುಡವನ್ನು ಅರ್ಥ ಮಾಡಿಕೊಳ್ಳಿ’ ಎಂದು ರಾಜೀವ್‌ರ ಲೋಕಸಭಾ ಕ್ಷೇತ್ರವಾಗಿದ್ದ ಅಮೇಠಿಯ ರಾಮ್‌ಲೀಲಾ ಮೈದಾನದಲ್ಲಿ ಬೃಹತ್‌ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಜವಾಹರಲಾಲ್‌ ನೆಹರೂ, ಇಂದಿರಾ ಗಾಂಧಿ ಹಾಗೂ ರಾಜೀವ್‌ ಗಾಂಧಿಯವರು ಯಾವ ತತ್ವಗಳಿಗಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದರೋ ಅವು ಇಂದು ತೀವ್ರ ಪರೀಕ್ಷೆಗೆ ಒಳಗಾಗಿವೆ. ಎಲ್ಲ ಕ್ಷೇತ್ರಗಳಲ್ಲೂ
ಪ್ರತ್ಯೇಕತೆಯ ಮತ್ತು ತಾತ್ಸಾರದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.