ADVERTISEMENT

ಸೋಮವಾರ, 7–10–1968

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2018, 20:09 IST
Last Updated 6 ಅಕ್ಟೋಬರ್ 2018, 20:09 IST
369
369   

ಬೆಲೆ ಏರಿಕೆ ತಡೆಗೆ ದೃಢ ರಾಷ್ಟ್ರೀಯ ನೀತಿ: ಕಾರ್ಮಿಕ ಆಯೋಗದ ಸಲಹೆ

ನವದೆಹಲಿ, ಆ. 6– ಬೆಲೆ ಮಟ್ಟವನ್ನು ತಡೆಹಿಡಿಯುವ ‘ದೃಢ ರಾಷ್ಟ್ರೀಯ ಬೆಲೆ ಮತ್ತು ವೇತನ ನೀತಿ’ ರೂಪಿಸಲು ಇರುವ ತುರ್ತು ಅಗತ್ಯವನ್ನು ರಾಷ್ಟ್ರೀಯ ಕಾರ್ಮಿಕ ಆಯೋಗದ ಅಧ್ಯಯನ ತಂಡ ಒತ್ತಿ ಹೇಳಿದೆ.

ಸಕ್ಕರೆ ತಂತ್ರಜ್ಞ ಶ್ರೀ ಎಸ್‌.ಎನ್‌. ಗುಂಡುರಾವ್‌ ಅವರ ಅಧ್ಯಕ್ಷತೆಯಲ್ಲಿನ ಏಳು ಸದಸ್ಯರ ಈ ಅಧ್ಯಯನ ತಂಡವು ಬೆಲೆಮಟ್ಟವನ್ನು ತಡೆಹಿಡಿಯುವ ಬಗ್ಗೆ ಅನೇಕ ವರ್ಷಗಳಿಂದ ಮಾತುಕತೆ ನಡೆಯುತ್ತಿದೆ ‘ಆದರೆ ಪರಿಣಾಮಕಾರಿಯಾಗಿಲ್ಲ’ ಎಂದು ಹೇಳಿದೆ.

ADVERTISEMENT

ಎರಡು ರೀತಿ ಬೆಲೆ ಜಾರಿಗೆ ತರಲು ಸರ್ಕಾರಕ್ಕೆ ಗಿರಿ ಸೂಚನೆ

ಬೆಂಗಳೂರು, ಅ. 6– ಅಗತ್ಯಬಿದ್ದರೆ ಸರ್ಕಾರ ನಷ್ಟದಲ್ಲಿ ಒಂದು ಭಾಗವನ್ನು ವಹಿಸಿಕೊಂಡು ತೀರ ಅವಶ್ಯಕ ವಸ್ತುಗಳ ಬೆಲೆಯನ್ನು ಕಡಿಮೆಯಲ್ಲಿಡುವ, ಭೋಗ ವಸ್ತುಗಳ ಬೆಲೆಯನ್ನು ಹೆಚ್ಚಿಸುವ– ಹೀಗೆ ‘ಎರಡು ಬಗೆಯ ಬೆಲೆ’ ವ್ಯವಸ್ಥೆಯನ್ನು ಜಾರಿಗೆತರುವ ಸಾಧ್ಯತೆಯನ್ನು ಪರಿಶೀಲಿಸಬೇಕೆಂದು ಉಪರಾಷ್ಟ್ರಪತಿ ಡಾ. ವಿ.ವಿ. ಗಿರಿಯವರು ಇಂದು ಇಲ್ಲಿ ಸಲಹೆ ಮಾಡಿದರು.

‘ನಾವು ಅನುಸರಿಸುತ್ತಿರುವ ಸಮಾಜವಾದಿ ಆರ್ಥಿಕ ವ್ಯವಸ್ಥೆಯಲ್ಲಿ ಆಹಾರ ಮತ್ತು ಸಾಮಾನ್ಯ ಬಟ್ಟೆಯಂತಹ ವಸ್ತುಗಳ ಬೆಲೆಯನ್ನು ಕಡಿಮೆ ಮಾಡುವ, ಭೋಗ ವಸ್ತುಗಳ ಬೆಲೆಯನ್ನು ಹೆಚ್ಚಿಸುವ ಸಾಧ್ಯತೆಯನ್ನು ಸರ್ಕಾರ ಪರಿಶೀಲಿಸಬೇಕು. ಇದು ಸುಲಭ ಕಾರ್ಯವಲ್ಲ, ನನಗೆ ಗೊತ್ತು. ಆದರೆ ಏರುತ್ತಿರುವ ಬೆಲೆಯನ್ನು ಕಡಿಮೆ ಮಾಡುವ ಒಂದು ಕ್ರಮವಾಗಿ ಸರ್ಕಾರ ಇದಕ್ಕೆ ಗಮನಹರಿಸಬೇಕು’ ಎಂದರು.

ಭೀಕರ ಮಳೆ, ಭೂ ಕುಸಿತ: ಡಾರ್ಜಿಲಿಂಗ್‌ನಲ್ಲಿ 310 ಮಂದಿ ಸಾವು, ಹಲವರು ಕಣ್ಮರೆ

ಡಾರ್ಜಿಲಿಂಗ್‌, ಅ. 6– ಗಿರಿಧಾಮದ ರಾಣಿಯೆಂದು ಪ್ರಖ್ಯಾತವಾಗಿರುವ ಡಾರ್ಜಿಲಿಂಗ್‌ ಸುತ್ತಮುತ್ತ ಸತತವಾಗಿ ನಾಲ್ಕು ದಿನಗಳ ಭಾರಿ ಮಳೆ ಬಿದ್ದು ಭೂಕುಸಿತವಾಗಿ 310 ಮಂದಿ ಸತ್ತಿದ್ದಾರೆ ಎಂದು ಇಂದು ರಾತ್ರಿ ಅಧಿಕೃತವಾಗಿ ಖಚಿತಪಟ್ಟಿತು.

ಡಾರ್ಜಿಲಿಂಗ್‌ಗೆ ಎಲ್ಲ ಕಡೆಯಿಂದಲೂ ಸಂಪರ್ಕ ಕಡಿದುಹೋಗಿದೆ. ಅಂತರವಿಭಾಗ ಸಂಪರ್ಕ ಪೂರ್ಣ ಅಸ್ತವ್ಯಸ್ತ, ಕೊಸೆಯೆಲಗ್‌ನಲ್ಲಿ ವಿದ್ಯುತ್‌ ಕೇಂದ್ರ ಕೊಚ್ಚಿಹೋಗಿದೆ.

ರಾಜಧನ ರದ್ದು ಮಸೂದೆ: ಮುಂದಿನ ಅಧಿವೇಶನದಲ್ಲಿ

ರಾಯಪುರ, ಅ. 6– ಮುಂದಿನ ತಿಂಗಳಿಂದ ಪ್ರಾರಂಭವಾಗುವ ಸಂಸತ್‌ ಅಧಿವೇಶನದಲ್ಲಿ ರಾಜಧನ ರದ್ದುಪಡಿಸಲು ಮಸೂದೆಯನ್ನು ಮಂಡಿಸಲಾಗುವುದು ಎಂದು ಕೇಂದ್ರ ಗೃಹಖಾತೆ ಸ್ಟೇಟ್‌ ಸಚಿವ ವಿ.ಸಿ. ಶುಕ್ಲ ಇಂದು ಇಲ್ಲಿ ಹೇಳಿದರು.

ಈ ವಿಷಯದ ಬಗ್ಗೆ ಸರ್ಕಾರ ಈ ಮೊದಲು ಕೈಗೊಂಡ ನಿರ್ಧಾರದಂತೆ ಮಸೂದೆ ಇರುತ್ತದೆ ಎಂದು ಅವರು ಪತ್ರಕರ್ತರಿಗೆ ತಿಳಿಸಿದರು.

ಪುನರ್ಜನ್ಮ ಕಥೆ ಆಧಾರರಹಿತ

ರಾಯಪುರ, ಅ. 6– ‘ಮನಸ್ಸಿನ ಉನ್ಮಾದ ಮತ್ತು ಸುಪ್ತ ಚಿತ್ತದಲ್ಲಿ ಹುದುಗಿರುವ ಆಶೆಗಳನ್ನು ಈಡೇರಿಸಿಕೊಳ್ಳುವ ಹಂಬಲದ ಫಲ ಹಿಂದಿನ ಜನ್ಮದ ಸ್ಮರಣೆ’

ಕೆಲವು ಪುನರ್ಜನ್ಮ ಪ್ರಕರಣಗಳ ಅಧ್ಯಯನ ನಡೆಸಿದ ಇಲ್ಲಿನ ಇಬ್ಬರು ಮನಶ್ಶಾಸ್ತ್ರಜ್ಞರು ಈ ಅಭಿಪ್ರಾಯಪಟ್ಟು, ಹಿಂದಿನ ಜನ್ಮದ ಸ್ಮರಣೆ ಒಂದು ಬಗೆಯ ಉನ್ಮತ್ತ ಮನಸ್ಥಿತಿಯೆಂದು ಹೇಳಿದ್ದಾರೆ.

ಇಂಥ ಮನಸ್ಸಿನ ಉನ್ಮಾದ–ವ್ಯಾಧಿಯನ್ನು ಗುಣಪಡಿಸುವುದಾಗಿ ಜಯಪುರ ಮೆಂಟಲ್‌ ಆಸ್ಪತ್ರೆಯ ಸೂಪರಿಂಟೆಂಡೆಂಟ್‌ ಡಾ. ಬಿ.ಕೆ. ವ್ಯಾಸ್‌ ತಿಳಿಸಿದ್ದಾರೆ.

ಅತಿರೇಕ ಸ್ವಭಾವ: ಸಾಮಾನ್ಯವಾಗಿ ಪುನರ್ಜನ್ಮ ಸಿದ್ಧಾಂತದ ವಾದಿಗಳು ಅತಿರೇಕ ಸ್ವಭಾವದವರು. ಇವು ಹೆಚ್ಚಾಗಿ ವ್ಯಕ್ತಿತ್ವದ ಸಮಸ್ಯೆಗಳು. ಹಿಂದಿನ ಜನ್ಮದ ನೆನಪುಗಳನ್ನು ಹೇಳಿಕೊಳ್ಳುವುದಕ್ಕೆ ಕಾರಣ ಮತ್ತೊಬ್ಬರಾಗಿ ವರ್ತಿಸುವ, ಬೇರೆ ವ್ಯಕ್ತಿತ್ವ ಗಳಿಸುವ ಹಂಬಲ ಎಂಬುದು ಡಾ. ಬಿ. ಕೆ. ವ್ಯಾಸ್‌ ನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.